ಹೈದರಾಬಾದ್: ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿಅಸಾದುದ್ದಿನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾನ ಅವತಾರವಾಗಿದ್ದು, ಅವರ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.
ಹೀಗೆಂದು ಹೈದಾರಾಬಾದ್‍ನಲ್ಲಿ ಅಸಾದುದ್ದಿನ್ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಿನ ತಿಂಗಳು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಇರುವ ಹಿನ್ನೆಲೆ ಬಿಜೆಪಿ ಪರ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.
ಅಸಾದುದ್ದಿನ್ ಓವೈಸಿ ವಿರುದ್ಧ ಗುಡುಗಿರುವ ತೇಜಸ್ವಿ ಸೂರ್ಯ, ಅವರಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದಿದ್ದಾರೆ. ಅಸಾದುದ್ದಿನ್ ಓವೈಸಿ ಹಾಗೂ ಸಹೋದರ ಅಕ್ಬರುದ್ದಿನ್ ಓವೈಸಿ ವಿಭಜನೆ ಹಾಗೂ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಬದಲಿಗೆ ರೊಹಿಂಗ್ಯಾ ಮುಸ್ಲಿಮರಿಗೆ ಮಾತ್ರ ಆಶ್ರಯ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಓವೈಸಿ ಜಿನ್ನಾನ ಹೊಸ ಅವತಾರ. ಹೀಗಾಗಿ ಅವರನ್ನು ಸೋಲಿಸಲೇಬೇಕು. ನೀವು ಇಲ್ಲಿ ಓವೈಸಿಗೆ ಮತ ಹಾಕಿದರೆ ಮುಂದೆ ಅವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಸ್ಲಿಂ ಪ್ರದೇಶಗಳಲ್ಲಿ ಬಲಶಾಲಿಯಾಗುತ್ತಾರೆ. ನೀವು ಬಿಜೆಪಿಗೆ ಹಾಕುವ ಪ್ರತಿ ಮತ ಭಾರತ, ಹಿಂದುತ್ವಕ್ಕೆ, ಇದರಿಂದ ದೇಶ ಬಲಗೊಳ್ಳಲಿದೆ ಎಂದು ಕರೆ ನೀಡಿದರು.
ಇದು ಹಿಂದೂ ಹೃದಯ ಸಾಮ್ರಾಟರಾದ ಪ್ರಧಾನಿ ನರೇಂದ್ರ ಮೋದಿಯವರ ಕಾಲಾವಧಿ. ಇದು ನಿಜಾಮರ ಕಾಲಾವಧಿಯಲ್ಲ ಎಂಬುದನ್ನು ನಾನು ಅಸಾದುದ್ದಿನ್ ಹಾಗೂ ಅಕ್ಬರುದ್ದಿನ್ ಅವರಿಗೆ ತಿಳಿಸಲು ಬಯಸುತ್ತೇನೆ. ನೀವಿಲ್ಲಿ ಏನೂ ಅಲ್ಲ ಎಂದು ಕಿಡಿಕಾರಿದರು.
ಹೈದರಾಬಾದ್‍ನ್ನು ಭಾಗ್ಯಾನಗರವಾಗಿ ಬದಲಿಸಬೇಕಿದೆ ಎಂದರು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾಪೋರೇಷನ್ ಚುನಾವಣೆ ಡಿಸೆಂಬರ್ 1ರಂದು ನಡೆಯುತ್ತಿದ್ದು, ಇದು ದಕ್ಷಿಣ ಭಾರತದ ಗೇಟ್‍ವೇಯಾಗಿದೆ. ಹೀಗಾಗಿ ಇಂದು ಹೈದರಾಬಾದನ್ನು ಬದಲಿಸೋಣ, ನಾಳೆ ತೆಲಂಗಾಣ, ನಾಡಿದ್ದು ದಕ್ಷಿಣ ಭಾರತವನ್ನು ಬದಲಿಸೋಣ. ಹೈದರಾಬಾದ್ ಚುನಾವಣೆಯನ್ನು ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು.