ಕಾಸರಗೋಡು : ಎಡನೀರು ಮಠದ ನೂತನ ಮಠಾಧೀಶರಾಗಿ ನಿಯುಕ್ತಿಗೊಂಡಿರುವ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಸೋಮವಾರ ಕಾಂಚಿ ಪೀಠದಲ್ಲಿ ದೀಕ್ಷೆ ಸ್ವೀಕರಿಸಿ ಮಂಗಳವಾರ ಎಡನೀರು ಪುರ ಪ್ರವೇಶ ನಡೆಸಿದರು.
ಸೋಮವಾರ ಕಾಂಚಿ ಜಗದ್ಗುರು ಪೀಠದಲ್ಲಿ ನಡೆದ ಸಮಾರಂಭದಲ್ಲಿ ಭಾರತಿ ವಿಜಯೇಂದ್ರ ಸರಸ್ವತಿ ಶ್ರೀಗಳು ದೀಕ್ಷೆ ನೀಡಿದರು. ಬಳಿಕ ಸಂಜೆ ಬೆಂಗಳೂರಲ್ಲಿರುವ ಶಾಖಾ ಮಠಕ್ಕೆ ಚಿತ್ರೈಸಿ ತಂಗಿದರು. ಮುಂಜಾನೆ ಬೆಂಗಳೂರಿನಿಂದ ಹೊರಟು ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ಶ್ರೀಗಳು ಎಡನೀರಿಗೆ ಆಗಮಿಸಿದರು. ಈ ವೇಳೆ ಶ್ರೀಗಳಿಗೆ ಭವ್ಯ ಸ್ವಾಗತ ನೀಡಲಾಯಿತು. ಪುರಪ್ರವೇಶದ ಬಳಿಕ ಪಟ್ಟದ ದೇವರ ಪೂಜೆ, ಬಳಿಕ ಎಡನೀರು ವಿಷ್ಣುಮಂಗಲ ದೇವಸ್ಥಾನ ಭೇಟಿ, ನವಗ್ರಹ ಶಾಂತಿ ಹವನದ ಪೂರ್ಣಾಹುತಿಯಲ್ಲಿ ಭಾಗವಹಿಸಿ ಮರಳಿ ಮಠಕ್ಕೆ ಹಿಂತಿರುಗಿದರು.
ಈ ಸಂದರ್ಭದಲ್ಲಿ ತಂತ್ರಿವರ್ಯರು, ವೈದಿಕರು, ಸಂಸದ ರಾಜಮೋಹನ ಉಣ್ಣಿತ್ತಾನ್, ಉದುಮ ಶಾಸಕ ಕೆ.ಕುಂಞ ರಾಮನ್, ಮುರಳೀ ತಂತ್ರಿ, ರವೀಶ ತಂತ್ರಿ ಕುಂಟಾರು, ಶ್ರೀಶದೇವ ಪೂಜಿತ್ತಾಯ, ಪೀಠಾರೋಹಣ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಸಚ್ಚಿದಾನಂದ ಭಾರತಿಗಳ ಪೀಠಾರೋಹಣ ವಿಧಿ ವಿಧಾನಗಳು ಬುಧವಾರದಂದು ನಡೆಯಲಿದೆ. ಬೆಳಿಗ್ಗೆ ಗಣಪತಿ ಹವನ, ಚಂಡಿಕಾ ಹೋಮ, ಪಟ್ಟದ ದೇವರಿಗೆ ಪೂಜೆ, ಅಭಿಷೇಕ ಪೂಜೆ, ಬೆಳಿಗ್ಗೆ 10 ರ ಬಳಿಕ ಪೀಠಾರೋಹಣ, ಮಧ್ಯಾಹ್ನ ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಮಾರಂಭದಲ್ಲಿ ನಾಡಿನ ಉದ್ದಗಲದ ವಿವಿಧ ಮಠಾಧೀಶರು, ಧಾರ್ಮಿಕ, ಸಾಂಸ್ಕೃತಿಕ , ಸಾಮಾಜಿಕ ಮುಂದಾಳುಗಳು ಪಾಲ್ಗೊಳ್ಳಲಿದ್ದು, ಸರ್ಕಾರದ ಕೋವಿಡ್ ಮಾನದಂಡ ದಂತೆ ಕಾರ್ಯಕ್ರಮ ನಡೆಯಲಿದೆ.