ಮಂಗಳೂರು : ಕೋಟೆಕಾರ್ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಬಿಜೆಪಿಯ ಜಯಶ್ರೀ ಪ್ರಪುಲ್ಲದಾಸ್ ಸರ್ವಾನುಮತದಿಂದ ನವೆಂಬರ್ 5 ರ ಗುರುವಾರ ಆಯ್ಕೆಯಾದರು.
ಕಳೆದ ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದ ಮೀಸಲಾತಿಯ ಪ್ರಕಾರವಾಗಿ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಕೋಟೆಕಾರ್ ಪಟ್ಟಣ ಪಂಚಾಯಿತಿಯು ಉಪಾಧ್ಯಕ್ಷರ ಆಡಳಿತದಲ್ಲಿ ನಡೆಯುತ್ತಿತ್ತು. ಭಾರತಿ ರಾಘವ ಗಟ್ಟಿ ಉಪಾಧ್ಯಕ್ಷರಾಗಿದ್ದರು. ಎರಡು ವರ್ಷದ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮೀಸಲಾತಿ ನೀಡಲಾಗಿದ್ದು ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಉಪಾಧ್ಯಕ್ಷರನ್ನು ಮಾತ್ರ ಆಯ್ಕೆ ಮಾಡಲಾಗಿತ್ತು.
ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಒಟ್ಟು 11, ಕಾಂಗ್ರೆಸ್ 4, ಎಸ್‌ಡಿಪಿಐ ಮತ್ತು ಸಿಪಿಎಂ ತಲಾ ಒಂದು ಸ್ಥಾನ ಪಡೆದಿತ್ತು.
ಈಗ ಎರಡೂವರೆ ವರ್ಷಗಳ ನಂತರ ಅಧ್ಯಕ್ಷರ ಚುನಾವಣೆ ನಡೆಸಲಾಗಿದ್ದು ನೂತನ ಅಧ್ಯಕ್ಷರ ಅಧಿಕರಾವಧಿ ಕೇವಲ ಆರು ತಿಂಗಳವರೆಗೆ ಮಾತ್ರ ಇರಲಿದೆ.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪ್ರದೇಶದ ಬಿಜೆಪಿ ಮುಖಂಡರಾದ ಚಂದ್ರಹಾಸ್ ಪಂಡಿತ್ ಹೌಸ್, ಸಂತೋಷ್ ಬೋಳಿಯಾರು, ಸತೀಶ್ ಕುಂಪಲ, ರವೀಂದ್ರ ಶೆಟ್ಟಿ ಉಳಿದೊಟ್ಟು, ಹೇಮಂತ್ ಶೆಟ್ಟಿ ದೇರಳಕಟ್ಟೆ, ಚಂದ್ರಶೇಖರ್ ಉಚ್ಚಿಲ್, ಯಶವಂತ್ ಅಮೀನ್ ಮತ್ತು ಶೇಖರ್ ಕನೀರ್‌ತೋಟ ಉಪಸ್ಥಿತರಿದ್ದರು.