ಮಂಗಳೂರು : ಕಾರ್ಯಕಾರಿಣಿ ಸಭೆ ನಡೆದ ಸಂದರ್ಭ ಪಟಾಕಿ ನಿಷೇಧದ ಬಗ್ಗೆ ಏಕೆ ಮಾತನಾಡಲಿಲ್ಲ. ಕಾರ್ಯಕಾರಿಣಿ ಸಭೆಯ ಮುಂಚೆ ಮಂಗಳೂರಿನಲ್ಲಿ ಪಟಾಕಿ ಸಿಡಿಸಲಾಗಿದೆ. ಚುನಾವಣಾ ವಿಜಯೋತ್ಸವಕ್ಕೆ ಪಟಾಕಿ ನಿಷೇಧವಿಲ್ಲ ಏಕೆ? ದೀಪಾವಳಿ ಬಂದಾಗ ಮಾತ್ರ ಯಾಕಾಗಿ ನಿಷೇಧ?. ಈ ಹಿಂದೆ ಸರ್ಕಾರ ಪಟಾಕಿ ಅಂಗಡಿಗೆ ಅನುಮತಿ ನೀಡಿ ಈಗ ಏಕಾಏಕಿ ಚರ್ಚಿಸದೇ ನಿಷೇಧವೇಕೆ?. ಕಾರ್ಯಕಾರಿಣಿ ಮುಗಿದ ಮೇಲೆ ಏಕೆ ನಿಷೇಧ?” ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕಾರಿಣಿಯಿಂದ ಜನರಿಗೆ ಏನು ಲಾಭ? ಪಕ್ಷದ ಒಳಜಗಳ ಚರ್ಚಿಸಲು ಈ ಸಭೆಯೇ?. ಜನರಿಗೆ ಬೇಕಾದ ಯಾವುದೇ ನಿರ್ಣಯ ಕೈಗೊಂಡಿಲ್ಲ” ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗಳನ್ನುದ್ದೇಶಿ ಮಾತನಾಡಿದ ಅವರು, ಕಾರ್ಯಕಾರಿಣಿ ಜನರ ಕಣ್ಣಿಗೆ ಮಣ್ಣೆರಚುವ ರಾಜಕಾರಣ. ಇದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟನೆ ಕೊಡಲಿ ಎಂದಿದ್ದಾರೆ.
ಪಟಾಕಿ ಮಾರಾಟಕ್ಕೆ ನಿಷೇಧ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲವ್ ಜಿಹಾದ್, ಮತಾಂತರದ ವಿರುದ್ದ ಕಠಿಣ ಕಾನೂನು ರಚಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಉದ್ದೇಶ ಒಳ್ಳೆಯ ರೀತಿಯದ್ದೇ ಆಗಿದ್ದರೆ ಕಾನೂನು ತರಲಿ. ಅದು ಬಿಟ್ಟು ಒಬ್ಬೊಬ್ಬರು ಹೇಳಿಕೆ ನೀಡೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಗೋಹತ್ಯೆ ನಿಷೇಧ ಮಾಡುತ್ತೇವೆ ಎಂದಿದ್ದರು. ಆದರೆ, ಇದುವರೆಗೆ ಯಾಕಾಗಿ ಮಾಡಿಲ್ಲ?. ನಿಷೇಧ ಮಾಡೋಕೆ ಇವರಿಗೆ ಧಮ್ ಇಲ್ವೇ?. ಇದೆಲ್ಲವೂ ಭಾವನಾತ್ಮಕವಾಗಿ ಕೆದಕುವ ವಿಚಾರ. ಇನ್ನು ಮುಂದೆ ಜನರು ಇವರನ್ನು ನಂಬಲಾರರು ಎಂದಿದ್ದಾರೆ.