ಮಂಗಳೂರು : ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ ವಾಗಿ ಸುರೇಂದ್ರ ಬಂಟ್ವಾಳ ಹತ್ಯೆ ನಾನೇ ಮಾಡಿದ್ದು ಎಂದು ಹೇಳಿಕೊಂಡು ವ್ಯಕ್ತಿಯೋರ್ವವಾಯ್ಸ್ ಮೆಸೇಜ್ ಮಾಡಿ ವಾಟ್ಸ್ ಆಪ್ ಮೂಲಕ ಹರಿಯ ಬಿಟ್ಟಿರುವುದು ಬೆಳಕಿಗೆ ಬಂದಿದೆ.
ಸುರೇಂದ್ರ ಜೊತೆಗಿದ್ದ ಸತೀಶ್ ಕುಲಾಲ್ ಎಂಬಾತ ಉಡುಪಿಯ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ ಎಂದು ತಿಳಿಸಿದ್ದಾನೆ ಎಂದು ಹೇಳಲಾಗಿದೆ.
ಸತೀಶ್ ಕುಲಾಲ್ ಪೊಲೀಸರಿಗೆ ಕಳುಹಿಸಿರುವ ವಾಯ್ಸ್ ಮೆಸೇಜ್‌ನಲ್ಲಿ, ”ನಾನು ಸುರೇಂದ್ರನೊಂದಿಗೆ 22 ವರ್ಷಗಳಿಂದ ಇದ್ದೇನೆ. ಆತನ ಎಲ್ಲಾ ಅವ್ಯವಹಾರಗಳು ನನಗೆ ತಿಳಿದಿದೆ. ಸುರೇಂದ್ರ ಕಿಶನ್ ಹೆಗ್ಡೆ ಕೊಲೆಗೆ ಹಣದ ಸಹಾಯ ಮಾಡಿದ್ದ. ಇದು ಉಡುಪಿಯ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ” ಎಂದು ತಿಳಿಸಿದ್ದಾನೆ.
”ಸುರೇಂದ್ರ ಕಿಶನ್ ಹೆಗ್ಡೆ ಕೊಲೆಗಾಗಿ ಹಣ ಸಹಾಯ ಮಾಡಿದಾಗ ನಾನು ಬೇಡವೆಂದು ಹೇಳಿದ್ದೆ. ಆಗ ನನ್ನನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾನು ಕಿಶನ್ ಹೆಗ್ಡೆ ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿದ್ದೇನೆ. ಎರಡು ದಿನದಲ್ಲಿ ಪೊಲೀಸರ ಮುಂದೆ ಶರಣಾಗುತ್ತೇವೆ” ಎಂದಿದ್ದಾನೆ.