ಬೆಂಗಳೂರು: ಕೆಎಎಸ್ ಅಧಿಕಾರಿ ಡಾ.ಬಿ. ಸುಧಾ ಮತ್ತು ಅವರ ನಿಕಟವರ್ತಿಗಳ ಮನೆಗಳಲ್ಲಿ ನೂರಾರು ಕೋಟಿ ಮೌಲ್ಯದ 200 ಸ್ಥಿರಾಸ್ತಿ ಪತ್ರಗಳು ಪತ್ತೆಯಾಗಿವೆ.
ಶನಿವಾರ ಸುಧಾ ಮತ್ತು ಅವರ ಶಂಕಿತ ಬೇನಾಮಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿತ್ತು. ಸ್ಥಿರಾಸ್ತಿ ಕ್ರಯ ಪತ್ರಗಳು, ಜಿಪಿಎ ಕರಾರುಗಳು, ಖರೀದಿ ಒಪ್ಪಂದ ಸೇರಿದಂತೆ 200 ಆಸ್ತಿ ಪತ್ರಗಳು ಪತ್ತೆಯಾಗಿವೆ ಎಂದು ಎಸಿಬಿ ಐಜಿಪಿ ಎಂ. ಚಂದ್ರಶೇಖರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳ 50 ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ. ಬ್ಯಾಂಕ್ ಖಾತೆಗಳಲ್ಲಿ ರೂ 3.5 ಕೋಟಿ ಠೇವಣಿ ಪತ್ತೆಯಾಗಿದೆ. ಏಳು ಸ್ಥಳಗಳಲ್ಲಿ ಶೋಧ ನಡೆಸಿದ್ದು, ರೂ 36.89 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದರು.
3.7 ಕೆ.ಜಿ. ಚಿನ್ನ ಮತ್ತು 10.5 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮನೆಗಳಲ್ಲಿ 50 ಚೆಕ್ ಲೀಫ್‌ಗಳು ಪತ್ತೆಯಾಗಿವೆ ಎಂದು ತಿಳಿಸಿದರು.