ಮಂಗಳೂರು : ಕೋವಿಡ್ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚು ಮಾಡಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ ಶ್ರೀಧರ್ ಹೇಳಿದರು.
ಅವರು ಇಂದು ಮಂಗಳೂರು ಮಹಾನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ವತಿಯಿಂದ ಕೋವಿಡ್-19 ಲಸಿಕೆಯ ಬಗ್ಗೆ ಪೂರ್ವ ತಯಾರಿ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಅಂಗವಾಗಿ ನಡೆದ ನಗರ ಲಸಿಕಾ ಕಾರ್ಯಪಡೆಯ ಚಾಲನಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕಾಸರಗೋಡು ಸೇರಿದಂತೆ ಇನ್ನಿತರ ಗಡಿಭಾಗದ ಪ್ರದೇಶದಿಂದ ವ್ಯಾಪಾರ, ಉದ್ಯೋಗ ಇತ್ಯಾದಿ ಕೆಲಸಗಳ ನಿಮಿತ್ತ ನಗರಕ್ಕೆ ಪ್ರವೇಶಿಸುವ ಜನರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಈ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.
ಹಬ್ಬ, ಜಾತ್ರಾ ಮಹೋತ್ಸವ ಇರುವುದರಿಂದ ನಗರದ ಮಾರುಕಟ್ಟೆ, ಬೀದಿ ಬದಿ ವ್ಯಾಪಾರಿಗಳು, ಹಾಗೂ ಬಂದರು ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟಿಗೆ ಹೆಚ್ಚು ಜನಸಂದಣಿ ಇರುವುದರಿಂದ ಈ ಪ್ರದೇಶದಲ್ಲಿ ಕೋವಿಡ್ ಸೋಂಕು ಹರಡುವ ಸಂಭವ ಇರುತ್ತದೆ, ಹಾಗಾಗಿ ಮುಂಜಾಗೃತ ಕ್ರಮವಾಗಿ ವ್ಯಾಪಾರಿಗಳಿಗೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಬೇಕು ಎಂದು ಹೇಳಿದರು.
ಮಂಗಳೂರು ನಗರ ಮಟ್ಟದಲ್ಲಿ ಕೋವಿಡ್-19 ಲಸಿಕೆಯ ವಿತರಣೆಗೆ ಎಲ್ಲಾ ರೀತಿಯ ಪೂರ್ವ ತಯಾರಿ ನಡೆಯುತ್ತಿದೆ, ಲಸಿಕೆಯ ಲಭ್ಯತೆ ಆಧಾರದಲ್ಲಿ ಹಾಗೂ ಆದ್ಯತೆಯ ಅನುಸಾರ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಮಾತನಾಡಿ, ಸರಕಾರದ ನಿರ್ದೇಶನದಂತೆ ಲಸಿಕೆ ವಿತರಣೆಗೆ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ, ನಗರ ಹಾಗೂ ತಾಲೂಕು ಟಾಸ್ಕ್ ಪೋರ್ಸ್ ತಂಡ ರಚಿಸಲಾಗಿದೆ. ಶೀಘ್ರವೇ ಲಸಿಕೆ ದೊರಕುವ ಸಾಧ್ಯತೆ ಇರುವುದರಿಂದ ಆದ್ಯತೆಯ ಮೇರೆಗೆ ಮೂರು ಹಂತದಲ್ಲಿ ಲಸಿಕೆಯು ವಿತರಣೆಯಾಗಲಿದೆ. ಲಸಿಕೆಯು ನೊಂದಣಿ ಮಾಡಿಕೊಂಡವರಿಗೆ ಪಡೆಯಲು ಅವಕಾಶ ಇರುತ್ತದೆ. ಈಗಾಗಲೇ ಲಸಿಕೆ ಹಂಚಿಕೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವ್ಯವಸ್ಥಿತವಾಗಿ ತಯಾರು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್ ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ.
ಜನವರಿ 17 ರಂದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಯಲಿದ್ದು, ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಪಾಲಿಸಿ ಅಂಗನವಾಡಿ ಕೇಂದ್ರ, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಮನೆ ಭೇಟಿಯ ಮೂಲಕ ಪಲ್ಸ್ ಪೋಲಿಯೋವನ್ನು ನೀಡಲಾಗುತ್ತದೆ.
ಪ್ರತೀ 4 ಸಿಬ್ಬಂದಿಗಳ ಬೂತ್ ರಚಿಸಿದ್ದು, ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಿದರೆ ಬೂತ್ ಸಂಖ್ಯೆಯನ್ನು ಜಾಸ್ತಿ ಮಾಡಬೇಕು ಎಂದು ಸೂಚಿಸಿದ ಅವರು, ಪಾಲಿಕೆಯ ವ್ಯಾಪ್ತಿ ಹಾಗೂ ಇನ್ನಿತರ ಪ್ರದೇಶಗಳಲ್ಲಿರುವ ಕಟ್ಟಡ ಕಾರ್ಮಿಕರ ಮಕ್ಕಳು, ವಲಸೆ ಬಂದ ಕುಟುಂಬ, ಕೊಳಚೆ ಪ್ರದೇಶದಲ್ಲಿ ವಾಸವಿರುವ ಮಕ್ಕಳು, ಅಪಾರ್ಟ್‍ಮೆಂಟ್‍ಗಳಲ್ಲಿ 5 ವರ್ಷದೊಳಗಿರುವ ಎಲ್ಲಾ ಮಕ್ಕಳು ಪಲ್ಸ್ ಪೊಲೀಯೋ ಲಸಿಕೆಯಿಂದ ವಂಚಿತರಾಗಬಾರದು ಕಡ್ಡಾಯವಾಗಿ ಲಸಿಕೆ ನೀಡಬೇಕು ಎಂದು ಸೂಚಿಸಿದರು.
ಪಲ್ಸ್ ಪೊಲಿಯೋ ಲಸಿಕೆಯ ಕುರಿತು ನಗರದ ಕಾರ್ಪೋರೇಟರ್ ಹಾಗೂ ಮೇಲ್ವಿಚಾರಕರಿಗೆ, ಸಾರ್ವಜನಿಕರಿಗೆ ಪೂರಕ ಮಾಹಿತಿಗಳನ್ನು ನೀಡಿ ಉತ್ತೇಜಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಆರ್.ಸಿಹೆಚ್ ಅಧಿಕಾರಿ ಡಾ. ರಾಜೇಶ್, ಆರ್.ಎಂ.ಓ ದುರ್ಗಾ ಪ್ರಸಾದ್, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗಡಿಭಾಗದಿಂದ ನಗರಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿ-ಪಾಲಿಕೆ ಆಯುಕ್ತ
- Advertisement -
Recent Comments
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಮಂಗಳೂರಿನಲ್ಲೊಬ್ಬ ಸೋನು ಸೂದ್ : ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ. ಇ. ಒ ವಿವೇಕ್ ರಾಜ್ ಪೂಜಾರಿ
on
ದೇಶವಿದೇಶಗಳಲ್ಲಿ ವೈರಲ್ ಆಗುತ್ತಿದೆ ಈ ವೀಡಿಯೋ : ಅಂಬಾನಿ ತನ್ನ ಘನತೆಗಾಗಿ ದೇಶದ ಘನತೆಯನ್ನು ಕುಗ್ಗಿಸುತ್ತಿದ್ದಾರೋ…!
on