ಮಂಗಳೂರು : ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನವದಂಪತಿ ದಾರುಣವಾಗಿ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಬಳಿಯ ಓವರ್ ಬ್ರಿಡ್ಜ್ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬಜಾಲ್ ನಿವಾಸಿ ರಯಾನ್ ಫರ್ನಾಂಡಿಸ್ ಮತ್ತು ಪ್ರಿಯಾ ಫರ್ನಾಂಡಿಸ್ ಮೃತ ದುರ್ದೈವಿಗಳು.
ಕಂಕನಾಡಿ ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ಇಬ್ಬರು ಕರ್ತವ್ಯ ಮುಗಿಸಿ ಉಳ್ಳಾಲ ಬಂಗೇರಲೇನ್ ನಲ್ಲಿರುವ ಮನೆಗೆ ತೆರಳುವ ವೇಳೆ ಅವಘಡ ಸಂಭವಿಸಿದೆ. ದಂಪತಿ ಇದ್ದ ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಪ್ರಿಯಾ ಕೊನೆಯುಸಿರೆಳೆದಿದ್ದು, ರಯಾನ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಿತ್ಯ ಅಪಘಾತಗಳು ನಡೆಯುತ್ತಲೇ ಇವೆ. ಫ್ಲೈಓವರ್ ಕೊನೆಗಳ್ಳುವ ತೊಕ್ಕೊಟ್ಟು ಓವರ್ ಬ್ರಿಡ್ಜ್ ಸ್ಥಳದಲ್ಲಿಯೇ ಉಳ್ಳಾಲಕ್ಕೆ ಹೋಗುವ ದಾರಿ ಇರುವುದರಿಂದ ಅಪಘಾತಗಳು ಸಂಭವಿಸುತ್ತವೆ ಅನ್ನೋದು ಸಾರ್ವಜನಿಕರ ವಾದ. ವಾರದ ಹಿಂದೆ ಬಸ್ ಮತ್ತು ಲಾರಿ ನಡುವೆ ಅಪಘಾತ ನಡೆದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರೋದು ದುರದೃಷ್ಟಕರ.