ಮಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ- ಕಾರ್ಮಿಕ- ಜನ ವಿರೋಧಿ ನೀತಿಗಳ ವಿರುದ್ದ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ನವೆಂಬರ್ 26ರಂದು ಅಖಿಲ ಭಾರತ ಮಹಾ ಮುಷ್ಕರ ನಡೆಯಲಿದ್ದು,ಅದರ ಯಶಸ್ವಿಗಾಗಿ ನಗರದಲ್ಲಿಂದು ದ.ಕ.ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶ ನಡೆಯಿತು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು, ಒಳ್ಳೆಯ ದಿನಗಳು ಬರಲಿದೆ ಎಂದು ಜನತೆಗೆ ಮಂಕುಬೂದಿ ಎರಚಿ ದೇಶದ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರವು ಹೆಜ್ಜೆಹೆಜ್ಜೆಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನೇ ಮಾರಲು ಹೊರಟಿದೆ.ರೈತರ ಭೂಮಿ ಮತ್ತೆ ಬಹುರಾಷ್ಟ್ರೀಯ ಕಂಪೆನಿಗಳ ತೆಕ್ಕೆಗೆ ಹೋಗುವಂತಾಗಲು ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕಾರ್ಮಿಕ ವರ್ಗದ ಶಕ್ತಿಯನ್ನು ಕ್ಷೀಣಿಸಲು ಆಕ್ರಮಣಕಾರಿ ನೀತಿಗಳನ್ನು ಜಾರಿಗೊಳಿಸಿ ಕಾರ್ಮಿಕರು ಸಂಘಟಿತರಾಗದಂತೆ ಆಳುವ ವರ್ಗಗಳು ಪಿತೂರಿ ನಡೆಸುತ್ತಿದೆ. ಇವೆಲ್ಲದರ ವಿರುದ್ದ ಕಾರ್ಮಿಕ ವರ್ಗ ಸೆಟೆದೆದ್ದು ಸಮರಶೀಲ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
AITUC ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜರವರು ಮಾತನಾಡುತ್ತಾ, ಆತ್ಮನಿರ್ಭರದ ಹೆಸರಿನಲ್ಲಿ ಎಲ್ಲಾ ಕ್ಷೇತ್ರಗಳನ್ನು ಸಂಪೂರ್ಣ ಖಾಸಗೀಕರಣಗೊಳಿಸಿ ಇಡೀ ದೇಶವನ್ನೇ ಮಾರಲು ಹೊರಟ ನರೇಂದ್ರ ಮೋದಿ ಸರಕಾರ ನಿಜಕ್ಕೂ ದೇಶದ್ರೋಹಿಯಾಗಿದೆ. ಮಾತೆತ್ತಿದ್ದರೆ ದೇಶಪ್ರೇಮದ ಬಗ್ಗೆ ಮಾತನಾಡುವವರು, ಜನರ ಭಾವನೆಗಳನ್ನು ಕೆರಳಿಸಿ ಜಾತಿ ಧರ್ಮದ ಹೆಸರಿನಲ್ಲಿ ಕಪಟ ರಾಜಕೀಯ ನಡೆಸಿ ದೇಶವನ್ನೇ ಅಧಾನಿ ಅಂಬಾನಿಗಳ ಕೈಗೊಪ್ಪಿಸಲು ಖಾಸಗೀಕರಣದ ಮಂತ್ರ ಜಪಿಸುತ್ತಿದ್ದಾರೆ ಎಂದು ಹೇಳಿದರು.
ಬ್ಯಾಂಕ್ ನೌಕರರ ರಾಷ್ಟ್ರೀಯ ನಾಯಕರಾದ ವಿನ್ಸೆಂಟ್ ಡಿಸೋಜ, ವಿಮಾ ನೌಕರರ ಜಿಲ್ಲಾ ಮುಖಂಡರಾದ ರಾಘವೇಂದ್ರ ರಾವ್,ಸಾರಿಗೆ ನೌಕರರ ರಾಜ್ಯ ಮುಖಂಡರಾದ ಪ್ರವೀಣ್ ಕುಮಾರ್ ರವರು ಮಾತನಾಡುತ್ತಾ, ದೇಶದ ಆರ್ಥಿಕತೆಗೆ ಭಾರೀ ಕೊಡುಗೆ ನೀಡಿದ ಬ್ಯಾಂಕಿಂಗ್ ಹಾಗೂ ವಿಮಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ದೇಶದ ಅರ್ಥ ವ್ಯವಸ್ಥೆಯನ್ನು ನಾಶ ಮಾಡಿದ ಮೋದಿ ಸರಕಾರದ ಕ್ರಮವನ್ನು ಇಡೀ ದೇಶ ಒಂದಾಗಿ ನಿಂತು ಖಂಡಿಸಬೇಕಾಗಿದೆ.ಕಳೆದ ಆರು ವರ್ಷಗಳಲ್ಲಿ ಎಲ್ಲಾ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಒಪ್ಪಿಸಿ ದೇಶದ ಕಾರ್ಮಿಕ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.
CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, AITUC ದ.ಕ.ಜಿಲ್ಲಾಧ್ಯಕ್ಷರಾದ ಬಿ.ಶೇಖರ್, AICCTU ಜಿಲ್ಲಾ ನಾಯಕರಾದ ಸತೀಶ್ ಕುಮಾರ್ ರವರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿ ಸಮಾವೇಶವನ್ನು ನಡೆಸಿ ಕೊಟ್ಟಿತು.
ಪ್ರಾರಂಭದಲ್ಲಿ AITUC ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್ ರವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು.