ಮಂಗಳೂರು : ಉಳ್ಳಾಲ ಸಮುದ್ರ ದಲ್ಲಿ ಮುಳುಗಿದ್ದ ಪರ್ಷಿಯನ್ ಬೋಟಿನಲ್ಲಿ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹವನ್ನು ಮುಳುಗುತಜ್ಞರು ಮೇಲಕ್ಕೆತ್ತಿದ್ದಾರೆ.
ಮೃತರನ್ನು ಬೊಕ್ಕಪಟ್ನ ನಿವಾಸಿಗಳಾದ ಪಾಂಡುರಂಗ ಸುವರ್ಣ, ಪ್ರೀತಂ (58) ಎಂದು ಗುರುತಿಸಲಾಗಿದೆ. ಇನ್ನು ನಾಪತ್ತೆಯಾದವರನ್ನು ಝಿಯಾವುಲ್ಲ(32), ಅನ್ಸಾರ್ (31), ಹಸೈನಾರ್ (25), ಚಿಂತನ್ (21) ಎಂದು ಹೇಳಲಾಗಿದೆ.
ಸೋಮವಾರ ನಸುಕಿನ ಜಾವ ಬೋಳಾರದ ಶ್ರೀ ರಕ್ಷಾ ಮೀನುಗಾರಿಕಾ ಬೋಟ್‌ನಲ್ಲಿ 22 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು ರಾತ್ರಿ ವಾಪಾಸ್ ಬರಬೇಕಾಗಿತ್ತು. ಆದರೆ ಉಳ್ಳಾಲದ ಪಶ್ಚಿಮ ಭಾಗದ ಹಲವು ನಾಟಿಕಲ್ ಮೈಲ್ ದೂರದಲ್ಲಿ ದೋಣಿ ಮಗುಚಿ ಬಿದ್ದಿದೆ. 14 ಮಂದಿಯನ್ನು ರಕ್ಷಿಸಲಾಗಿದ್ದು ಆರು ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಇಬ್ಬರ ಮೃತ ದೇಹ ಲಭಿಸಿದೆ. ಇನ್ನುಳಿದ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಲಿದೆ.
ಮೀನಿನ ಸಂಗ್ರಹ ಅಧಿಕವಾದ ಹಾಗೂ ಭಾರೀ ಗಾಳಿ ಬೀಸಿದ ಪರಿಣಾಮ ಈ ದೋಣಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.