ಮಂಗಳೂರು : ಪೌರ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿ/ಮ್ಯಾನುಯಲ್ ಸ್ಕ್ಯಾವೆಂಜರ್‍ಗಳ ಪ್ರಗತಿ ಪರಿಶೀಲನೆ, ಜಾಗೃತಿ ಮತ್ತು ಉಸ್ತುವಾರಿ ಪ್ರಗತಿ ಪರಿಶೀಲನೆ ಹಾಗೂ ಜಾತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪೌರಕಾರ್ಮಿಕರಿಗೆ ಕೊಠಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೂಕ್ತ ಸ್ಥಳ ನಿಗದಿಪಡಿಸಿ, ಇದಕ್ಕೆ ಪ್ರತ್ಯೇಕ ಕ್ರೀಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಎಲ್ಲಾ ನಗರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಮೂಲಭೂತ ಸೌಕರ್ಯಗಳಾದ ಶೌಚಾಲಯ, ವಸ್ತ್ರ ಬದಲಾವಣೆ ಕೊಠಡಿ (ಗೃಹ) ಹಾಗೂ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪೌರ ಕಾರ್ಮಿಕರಲ್ಲಿ ಸ್ತ್ರೀ-ಪುರುಷರೆಂಬ ತಾರತಮ್ಯ ಮಾಡದೇ ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು, ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಬೇಕು ಎಂದರು.
ಪೌರಕಾರ್ಮಿಕರಿಗೆ ಮೀಸಲಿಟ್ಟ ಜಮೀನಿನಲ್ಲಿ ಅನಧಿಕೃತ ಕಟ್ಟಡ, ಮನೆ ನಿರ್ಮಾಣ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ಗಮನಕ್ಕೆ ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ತಾಲೂಕಿನ ತಹಶೀಲ್ದಾರರು ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರನ್ನು ಪಟ್ಟಿ ಮಾಡಿ, ಜೊತೆಗೆ ಆಯಾ ತಾಲೂಕಿನಲ್ಲಿರುವ ಜಮೀನನ್ನು ಗುರುತಿಸಿ ಅದರ ಸಂಪೂರ್ಣ ಮಾಹಿತಿ ನೀಡಬೇಕು. ನಿವೇಶನ ರಹಿತರನ್ನು ಗುರುತಿಸಿ ಶೀಘ್ರದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಹೇಳಿದರು.
ಜಾತಿ ಪರಿಶೀಲನೆ ಬಾಕಿ ಇರುವ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸ್ಥಳ ಮಹಜರು ಮಾಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಂಡು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸ್ಥಳೀಯ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಯಾವುದೇ ರೀತಿಯ ದೌರ್ಜನ್ಯ ಸಂಭವಿಸಿದರೆ ಮೊದಲು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು, ಪೊಲೀಸ್ ಇಲಾಖೆಯವರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು, ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಉಪವಿಭಾಗಾಧಿಕಾರಿ ಮದನ್ ಮೋಹನ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಯೋಗಿಶ್ ಎಸ್. ಬಿ, ಮತ್ತಿತರರು ಉಪಸ್ಥಿತರಿದ್ದರು.