ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಸೆರೆಹಿಡಿಯಲು ತೆರಳಿದ್ದ ನವಜೋಡಿ ತೆಪ್ಪ ಮುಳುಗಿ ದುರಂತ ಸಾವನ್ನಪ್ಪಿದ್ದು ಈ ದುರಂತದ ಕೊನೆಯ ಕ್ಷಣದ ಕಾರಣವನ್ನು ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದಾರೆ.
ನವ ಜೋಡಿ ಚಂದ್ರು ಮತ್ತು ಶಶಿಕಲಾ ಮೈಸೂರಿನ ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ಮುಂದಾಗಿದ್ದು ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ಫೋಟೋಶೂಟ್ ಮಾಡುತ್ತಿದ್ದರು. ಆದರೆ ದುರಂತ ತೆಪ್ಪ ಮುಳುಗಿ ನವ ಜೋಡಿ ದುರಂತ ಸಾವು ಕಂಡಿತ್ತು.
ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು ನವ ವಧು ಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಉಡುಪನ್ನು ದರಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಹೀಲ್ಡ್ ಚಪ್ಪಲಿ ಧರಿಸಿದ್ದ ವಧು ತೆಪ್ಪದಲ್ಲಿ ನಿಂತುಕೊಂಡು ಫೋಸ್ ನೀಡುತ್ತಿದ್ದರು. ನಂತರ ಕುಳಿತುಕೊಳ್ಳಲು ಯತ್ನಿಸಿದಾಗ ತೆಪ್ಪ ಮುಗುಚಿದೆ. ಈ ವೇಳೆ ಈಜುಬಾರದೆ ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಫೋಟೋಗ್ರಾಫರ್ ಕೀರ್ತಿ ಹಾಗೂ ತೆಪ್ಪ ನಡೆಸುತ್ತಿದ್ದ ಮೂಗಪ್ಪ ವಿರುದ್ಧ ತಲಕಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.