ಮಂಗಳೂರು: ಸಮೋಸ ತಿನ್ನಲು ಹೋಟೆಲಿಗೆ ಬಂದ ಗ್ರಾಹಕರು ಕ್ಷುಲ್ಲಕ ಕಾರಣಕ್ಕೆ ದಿಢೀರ್ ಶೂಟೌಟ್ ನಡೆಸಿರುವ ಘಟನೆ ನಗರದ ಫಳ್ನೀರ್ನಲ್ಲಿ ನಡೆದಿದೆ.
ಶೂಟೌಟ್ನಲ್ಲಿ ಫಳ್ನೀರ್ ನಿವಾಸಿ ಸಾಹಿಲ್ (30) ಮತ್ತು ಸುರತ್ಕಲ್ ನಿವಾಸಿ ಸೈಫ್ (25) ಗಾಯಗೊಂಡವರು. ಘಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ಫಳ್ನೀರ್ ನಲ್ಲಿರುವ ಹೋಟೆಲ್ವೊಂದಕ್ಕೆ ಗ್ರಾಹಕರಾಗಿ ಬಂದವರು ಸಮೋಸ ಕೇಳಿದ್ದರು. ಆಗ ಹೋಟೆಲ್ ಮತ್ತು ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಈ ವೇಳೆ ಹೋಟೆಲ್ನಿಂದ ಹೊರಗೆ ಬಂದ ಗ್ರಾಹಕರು ತಮ್ಮಲ್ಲಿದ್ದ ಪಿಸ್ತೂಲ್ನಿಂದ ಶೂಟ್ ಮಾಡಿದ್ದಾರೆ.
ಆರೋಪಿಗಳನ್ನು ಹೋಟೆಲ್ನವರು ಓಡಿಸಿಕೊಂಡು ಹೋಗಿದ್ದು, ಈ ವೇಳೆ ಮತ್ತೆ ಶೂಟ್ ಮಾಡಿದ್ದಾರೆ. ಈ ವೇಳೆ ಇಬ್ಬರು ಗ್ರಾಹಕರು ಮತ್ತು ಹೋಟೆಲ್ನ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ದೌಡಾಯಿಸಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ.