Wednesday, May 31, 2023
Homeಕರಾವಳಿಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ- ನಳಿನ್ ಕುಮಾರ್ ಕಟೀಲ್

ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ- ನಳಿನ್ ಕುಮಾರ್ ಕಟೀಲ್

- Advertisement -


Renault

Renault
Renault

- Advertisement -

ಮಂಗಳೂರು : ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯನ್ನು ಜನಪ್ರತಿನಿಧಿಗಳ ಸಹಕಾರದೊಂದಿಗೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೀದಿಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಪುನಃಚ್ಛೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪಿಎಂ-ಸ್ವನಿಧಿ ಯೋಜನೆಯನ್ನು ರೂಪಿಸಿದ್ದು, ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ರಸ್ತೆಯ ಅಕ್ಕಪಕ್ಕದಲ್ಲಿ ತಾತ್ಕಾಲಿಕ (ಶೆಡ್)ಅಂಗಡಿ ನಿರ್ಮಿಸಿ ವ್ಯಾಪಾರ ನಡೆಸುವ, ಗೂಡಂಗಡಿ, ತಳ್ಳುಗಾಡಿ, ಗೂಡ್ಸ್‍ಗಾಡಿಗಳಲ್ಲಿ ಚಿಕ್ಕ ಪುಟ್ಟ ಕ್ಯಾಂಟೀನ್, ಮನೆಯಲ್ಲಿ ಕ್ಯಾಂಟೀನ್ ನಡೆಸುವ ವ್ಯಾಪಾರಿಗಳು ಕೂಡ ತಮ್ಮ ವ್ಯಾಪಾರವನ್ನು ಮುಂದುವರಿಸಲು ಅವಶ್ಯಕವಿರುವ ತುರ್ತು ಬಂಡವಾಳಕ್ಕೆ ಈ ಯೋಜನೆಯ ಮೂಲಕ ನೆರವು ಪಡೆಯಬಹುದು ಎಂದರು.
ಬಂದರು ಪ್ರದೇಶಗಳಲ್ಲಿ, ವಾರದ ಸಂತೆ, ಜಾತ್ರೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೀದಿವ್ಯಾಪಾರಿಗಳು ವ್ಯಾಪಾರ ನಡೆಸುತ್ತಾರೆ, ಅವರನ್ನು ಗುರುತಿಸಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಜಿಲ್ಲೆಯ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೆಚ್ಚಿನ ಒಲವು ತೋರಿಸಿ ನಿಗದಿತ ಕಾಲಮಿತಿಯೊಳಗೆ ಗುರಿ ಸಾಧಿಸಬೇಕೆಂದು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಕೋವಿಡ್-19, ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪಿಎಂ-ಸ್ವನಿಧಿಯ ಮೂಲಕ ವಿಶೇಷ ಕಿರುಸಾಲ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಈ ಯೋಜನೆ ದೊರಕಬೇಕು. ಈ ನಿಟ್ಟಿನಲ್ಲಿ ಸಂತೆ, ಮಾರುಕಟ್ಟೆ, ಬಂದರು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಬೀದಿಬದಿ ವ್ಯಾಪಾರ ಮಾಡುವ ಪ್ರದೇಶಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ತಂಡದೊಂದಿಗೆ ಲ್ಯಾಪ್‍ಟಾಪ್ ಮೂಲಕ ಖುದ್ದಾಗಿ ಭೇಟಿ ನೀಡಿ ಅರ್ಜಿಗಳನ್ನು ಪಡೆದು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಸೂಚಿಸಿದರು.

ಸ್ಥಳೀಯ ಸಂಸ್ಥೆಗಳಿಂದ ಗುರುತಿನ ಚೀಟಿ ಪಡೆದಿರದ ವ್ಯಾಪಾರಿಗಳು ಗುರುತಿನ ಚೀಟಿ ಹಾಗೂ ವ್ಯಾಪಾರ ಮಾರಾಟ ಪ್ರಮಾಣಪತ್ರವನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಸಮೀಕ್ಷೆಯಲ್ಲಿ ಗುರುತಿಸಲ್ಪಡದ ಅಥವಾ ಸಮೀಕ್ಷೆ ನಂತರ ಬೀದಿಬದಿ ವ್ಯಾಪಾರ ಪ್ರಾರಂಭಿಸಿರುವ ಫಲಾನುಭವಿಗಳಿಗೆ ಹಾಗೂ ಅಸುಪಾಸಿನ ಊರುಗಳಿಂದ ಬಂದು ನಗರ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವವವರಿಗೆ ಶಿಫಾರಸ್ಸು ಪತ್ರ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಪಾಲಿಕೆಯ ವ್ಯಾಪ್ತಿಯಲ್ಲಿ ಆಯಾ ವಾರ್ಡಿನ ಕಾರ್ಪೋರೇಟ್‍ಗಳಿಗೆ ಯೋಜನೆಯ ಕುರಿತು ಮಾಹಿತಿ ನೀಡಿ, ಅವರ ನೆರವು ಪಡೆದುಕೊಂಡು ಪ್ರತೀ ವಾರ್ಡ್‍ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಆಗಬೇಕು ಎಂದರು ಪಟ್ಟಣ ಪಂಚಾಯತ್‍ಗಳಲ್ಲಿ ಅಧಿಕಾರಿಗಳು ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದರು.

ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯಾತ್ರಿ ನಾಯಕ್ ಸಭೆಯಲ್ಲಿ ಪಿಎಂ ಸ್ವನಿಧಿ ಯೋಜನೆಯ ಮೂಲಕ ಬೀದಿಬದಿ ವ್ಯಾಪಾರ ಪುನರ್ ಪ್ರಾರಂಭಿಸಲು ಅಥವಾ ಮುಂದುವರಿಸಲು ರೂ. 10,000 ತುರ್ತುಬ್ಯಾಂಕ್ ಸಾಲವನ್ನು 7% ಬಡ್ಡಿ ಸಹಾಯಧನದೊಂದಿಗೆ ಒಂದು ವರ್ಷದ ಅವಧಿಯಲ್ಲಿ 12 ಮಾಸಿಕ ಕಂತುಗಳಲ್ಲಿ ಮರುಪಾವತಿಸಲು ಷರತ್ತಿನ ಮೇರೆಗೆ ಒದಗಿಸಲಾಗುತ್ತದೆ ಎಂದರು. ಡಿಜಿಟಲ್ ವ್ಯವಹಾರಕ್ಕಾಗಿ ಮಾಸಿಕ ರೂ. 100, ಒಟ್ಟು ವಾರ್ಷಿಕ ರೂ 1,200 ಕ್ಯಾಶ್‍ಬ್ಯಾಕ್ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಮಾಹೆಯಾನ ನಿಗಧಿತ ಕಾಲದೊಳಗೆ ಸಾಲ ಮರುಪಾವತಿ ಮಾಡುವ ಫಲಾನುಭವಿಗಳಿಗೆ ಹೆಚ್ಚಿನ ಮೊತ್ತದ ಬ್ಯಾಂಕ್ ಸಾಲವನ್ನು ಒದಗಿಸುವ ಅವಕಾಶ ಮುಂದೆ ನೀಡಲಾಗುವುದು, ಜಿಲ್ಲೆಯಲ್ಲಿ ಒಟ್ಟು 7,792 ಗುರಿ ಇದ್ದು, ಈಗಾಗಲೇ 1,840 ಅರ್ಜಿಗಳನ್ನು ಅನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments