ಮಂಗಳೂರು: ಬ್ಯಾರಿ ಭಾಷೆಯಲ್ಲಿ ಹಿಡಿತ ಇರುವವರನ್ನು ಬಳಸಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಸೂಕ್ತ ವಿಷಯಗಳನ್ನು ಆಯ್ದು ಬಲ್ಲವರಿಂದ ಯಕ್ಷಗಾನ ಪದ್ಯಗಳನ್ನು ರಚಿಸಬಹುದು ಎಂದು ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದ ಉರ್ವ ಸ್ಟೋರ್ನ ತುಳು ಭವನದಲ್ಲಿ ನಡೆದ ‘ಯಕ್ಷಗಾನ ಮತ್ತು ಬ್ಯಾರಿ ಸಂಬಂಧ ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಕ್ಷಗಾನದಲ್ಲಿ ಕನ್ನಡ ಭಾಷೆಯಲ್ಲಿ ಬಳಸುವಂತೆ ಬ್ಯಾರಿ ಭಾಷೆಗಳಲ್ಲಿಯೂ ಶಬ್ದಗಳು ಇವೆಯೇ ಎಂಬುದನ್ನು ಪರಿಶೀಲಿಸಿ, ಛಂದಸ್ಸು, ಮಾತ್ರಾ ಗಣಗಳಿಗೆ ಒಪ್ಪುವ ಬ್ಯಾರಿ ಪದಗಳನ್ನು ಬಳಸಿ ಯಕ್ಷಗಾನ ಪ್ರಸಂಗ ರಚಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಯಕ್ಷಗಾನದಲ್ಲಿ ರಾಮಾಯಣ, ಭಾಗವತ, ಮಹಾಭಾರತ, ಶಿವ ಪುರಾಣ ಮುಂತಾದ ಕಥೆಗಳನ್ನು ಆಯ್ಕೆ ಮಾಡಿ ಪ್ರಸಂಗಗಳನ್ನು ರಚಿಸಲಾಗುತ್ತದೆ. ಅದೇ ರೀತಿ ಬ್ಯಾರಿ ಭಾಷೆಗಳಲ್ಲಿ ಪ್ರಸಂಗ ರಚಿಸುವಾಗ ಇಂತಹದೇ ಪೌರಾಣಿಕ ಕಥಾವಸ್ತುವನ್ನು ಇರಿಸಿ ಯಕ್ಷಗಾನ ರಚಿಸಬೇಕೆಂದು ಕಟ್ಟಪ್ಪಣೆ ಇಲ್ಲ. ಪೌರಾಣಿಕ ಅಲ್ಲದ ವಿಷಯಗಳನ್ನು ಇರಿಸಿಯೂ ಪ್ರಸಂಗ ರಚಿಸಲು ಸಾಧ್ಯವಿರುವುದರಿಂದ ಬ್ಯಾರಿ ಸಾಂಸ್ಕೃತಿಕ, ಜಾನಪದೀಯ ವಿಚಾರಗಳಲ್ಲಿರುವ ಒಪ್ಪನೆಯ ಹಾಡುಗಳಲ್ಲಿನ ಕಥೆಗಳನ್ನು ಆಯ್ದುಕೊಂಡು ಮನೋಜ್ಞವಾಗಿರುವ ಪ್ರಸಂಗಗಳನ್ನು ರಚಿಸಲು ಸಾಧ್ಯ. ಹಾಗಾಗಿ ಬ್ಯಾರಿ ಭಾಷೆಯಲ್ಲಿ ಕಥಾ ವಸ್ತುವಿಗೆ ಯಾವ ಕೊರತೆಯೂ ಇಲ್ಲ ಎಂದು ಜಬ್ಬಾರ್ ಸಮೋ ಸಂಪಾಜೆ ಹೇಳಿದರು.
ಈ ಸಂದರ್ಭ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು. ದ.ಕ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಬೆಲ್ಕಿರಿ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್, ಸಾಹಿತಿ ಅಬ್ದುಲ್ ರೆಹ್ಮಾನ್ ಕುತ್ತೆತ್ತೂರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಚೇತಕ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.