ಮಂಗಳೂರು : ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹ, ಅತಿವೃಷ್ಟಿಯಿಂದ ಫಸಲು ಕಡಿಮೆಯಾಗಿರುವುದು ದಿನನಿತ್ಯದ ಅಡುಗೆ ಬಳಕೆಗೆ ಅತಿ ಅಗತ್ಯವಾದ ಈರುಳ್ಳಿ ಬೆಲೆ ಗಗನಕ್ಕೇರಲು ಕಾರಣ ಎನ್ನಲಾಗುತ್ತಿದೆ.
ಈರುಳ್ಳಿ ದರ ನೂರರ ಗಡಿ ಸಮೀಪಿಸುತ್ತಿದ್ದರೆ, ನಗರದ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊರತೆಯೂ ಉಂಟಾಗಿದೆ. ಮಂಗಳೂರು ಎಪಿಎಂಸಿಯಲ್ಲಿ ಸಣ್ಣ ಈರುಳ್ಳಿ ಬೆಲೆ 60 ರೂ.ನಿಂದ ಆರಂಭಗೊಂಡು ದೊಡ್ಡ ಈರುಳ್ಳಿಯ ದರ 85 ರೂ.ವರೆಗೆ ಏರಿಕೆಯಾಗಿದೆ. ಇನ್ನೆರಡು ದಿನಗಳಲ್ಲಿ ಇದು 100ರ ಗಡಿ ದಾಟಲಿದೆ ಎನ್ನುವುದು ಮಾರುಕಟ್ಟೆಯ ತಜ್ಞರ ಅಭಿಮತ.
ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಸೆಪ್ಟಂಬರ್ ಕೊನೆಯ ವಾರ ಹಾಗೂ ಅಕ್ಟೋಬರ್ ಆರಂಭದಲ್ಲಿ ಹೆಚ್ಚು ಮಳೆ ಸುರಿದಿದೆ. ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದ್ದ ವೇಳೆ ಉಂಟಾದ ಅತಿವೃಷ್ಟಿಯಿಂದ ಬೆಳೆ ಹಾಳಾಯಿತು. ಎಕರೆಗೆ ಸರಾಸರಿ 250 ಚೀಲದಷ್ಟು ಸಿಗುತ್ತಿದ್ದ ಈರುಳ್ಳಿಯ ಪ್ರಮಾಣ 70 ಚೀಲಗಳಿಗೆ ಇಳಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದಿರುವುದೇ ಬೆಲೆ ಏರಿಕೆಗೆ ಮೂಲಕಾರಣ ಎನ್ನುತ್ತಾರೆ ಈರುಳ್ಳಿ ವ್ಯಾಪಾರಸ್ಥರು.