ಮಂಗಳೂರು : ಕಳೆದ ಏಳೆಂಟು ತಿಂಗಳಿನಿಂದ ಕೋವಿಡ್ 19 ಹಿನ್ನೆಲೆಯಲ್ಲಿ ನಿಲುಗಡೆಯಾಗಿದ್ದ ಮಂಗಳೂರು-ಕಾಸರಗೋಡು ನಡುವಿನ ಸರಕಾರಿ ಬಸ್ ಸಂಚಾರ ಸೋಮವಾರ ಅರಂಭಗೊಂಡಿದೆ.
ಸೋಮವಾರ ಎರಡೂ ರಾಜ್ಯಗಳ 40 ಸರಕಾರಿ ಬಸ್‌ಗಳು ಪ್ರಯಾಣಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‌ಗಳನ್ನು ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು. ಕೋವಿಡ್ 19 ನಿಯಮಗಳ ಪಾಲನೆಯೊಂದಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ಅಧಿಕಾರಿ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 7ರಿಂದ ಸುಮಾರು 20 ಬಸ್‌ಗಳನ್ನು ಮಂಗಳೂರಿನಿಂದ ಕಾಸರಗೋಡಿಗೆ ಮತ್ತು 20 ಬಸ್‌ಗಳು ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸಿವೆ.
ಲಾಕ್‌ಡೌನ್ ತೆರವಿನ ಬಳಿಕ ಹಂತ ಹಂತವಾಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ ವೇಳೆ ಮಂಗಳೂರಿನಿಂದ ಹೊರಟ ಸರಕಾರಿ ಬಸ್‌ಗಳು ತಲಪಾಡಿವರೆಗೆ ಚಲಿಸುತ್ತಿತ್ತು. ಇದೀಗ ಮಂಗಳೂರಿನಿಂದ ಕಾಸರಗೋಡಿಗೆ ಮತ್ತು ಕಾಸರಗೋಡಿನಿಂದ ಮಂಗಳೂರಿಗೆ ಬಸ್‌ಗಳು ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಜ್ಯ ಬಸ್ ಸಂಚಾರದ ಬಗ್ಗೆ ಪ್ರತ್ಯೇಕ ಅನುಮತಿಯ ಅಗತ್ಯವಿಲ್ಲ ಎಂದು ಕೇರಳ ಸಾರಿಗೆ ಕಾರ್ಯದರ್ಶಿ ಸ್ಪಷ್ಟಪಡಿಸಿದ ಬಳಿಕ ಎಚ್ಚೆತ್ತುಕೊಂಡ ಕಾಸರಗೋಡು ಜಿಲ್ಲಾಡಳಿತವು ಬಸ್ ಸಂಚಾರಕ್ಕೆ ಒಲವು ತೋರಿದ ಮೇರೆಗೆ ಸಂಚಾರ ಆರಂಭಗೊಂಡಿವೆ.