ಮಂಗಳೂರು: ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹ ಸಂಸ್ಥೆ ಶುಕ್ರವಾರ ಮಧ್ಯರಾತ್ರಿಯಿಂದ ವಹಿಸಿಕೊಂಡಿದೆ. ಅಧಿಕೃತ ಹಸ್ತಾಂತರ ಪ್ರಕ್ರಿಯೆಯು ಶುಕ್ರವಾರ ಮಧ್ಯರಾತ್ರಿ ವಿಮಾನ ನಿಲ್ದಾಣದಲ್ಲಿ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್ ಅವರು, ಅದಾನಿ ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಸಿಇಒ ಅಶುತೋಷ್ ಚಂದ್ರ ಅವರಿಗೆ ವಿಮಾನ ನಿಲ್ದಾಣವನ್ನು ಹಸ್ತಾಂತರಿಸಿದರು. ಅದಾನಿ ಏರ್‌ಪೋರ್ಟ್‌ನ ಸಿಇಒ ಬೆಹ್ನಾದ್ ಝಂಡಿ, ಆರ್. ಮಾಧವನ್, ಬಿ.ಕೆ. ಮಲ್ಹೋತ್ರಾ ಈ ಸಂದರ್ಭದಲ್ಲಿ ಇದ್ದರು. ನಿರ್ವಹಣೆಯನ್ನು ಹಸ್ತಾಂತರಿಸುವ ಮೊದಲು ಪೂಜೆ ನೆರವೇರಿದ್ದು, ಕೋವಿಡ್–19 ಹಿನ್ನೆಲೆಯಲ್ಲಿ ಕೆಲವು ಜನರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಪ್ರಯಾಣಿಕರನ್ನು ಸಿಇಒ ಅಶುತೋಷ್ ಚಂದ್ರ ಅವರು ಹೂ ನೀಡಿ ಸ್ವಾಗತಿಸಿದರು.
ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಈ ಹಸ್ತಾಂತರ ನಡೆದಿದ್ದು, ಅದಾನಿ ಸಮೂಹ ಸಂಸ್ಥೆ ನಿರ್ವಹಣೆ ವಹಿಸಿಕೊಂಡ ಪ್ರಥಮ ವಿಮಾನ ನಿಲ್ದಾಣ ಇದಾಗಿದೆ. ಮುಂದಿನ ಮೂರು ತಿಂಗಳು ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಅದಾನಿ ಸಂಸ್ಥೆಗೆ ಮಾರ್ಗದರ್ಶನ ನೀಡಲಿದ್ದು, ಈಗಿರುವ ಸಿಬ್ಬಂದಿಯೇ ಮೂರು ವರ್ಷಗಳವರೆಗೆ ಮುಂದುವರಿಯಲಿದ್ದಾರೆ ಎಂದು ಅದಾನಿ ಸಂಸ್ಥೆ ತಿಳಿಸಿದೆ.
ಅದಾನಿ ಸಮೂಹ ಸಂಸ್ಥೆ ನಿರ್ವಹಣೆ ವಹಿಸಿಕೊಳ್ಳುತ್ತಿದ್ದಂತೆಯೇ ವಿಮಾನ ನಿಲ್ದಾಣದ ಜತೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಚಿತ್ರಣವೂ ಬದಲಾಗಿದೆ.
‘ನಿಮ್ಮ ಜೀವನದ ಸುಮಧುರ ಕ್ಷಣಗಳಿಗೆ ಸ್ವಾಗತ. ಅದಾನಿ ಮಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ನಿಮಗೆ ಉತ್ತಮ ಸೇವೆ ನೀಡಲು ಸದಾ ಉತ್ಸುಕವಾಗಿದೆ’ ಎಂಬ ಸಂದೇಶವನ್ನು ಮಧ್ಯರಾತ್ರಿ 1.29ಕ್ಕೆ ಟ್ವಿಟರ್‌ನಲ್ಲಿ ಹಾಕಲಾಗಿದೆ.
1951 ರ ಡಿಸೆಂಬರ್ 25 ರಂದು ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಡೌಗ್ಲಾಸ್ ಡಿಸಿ–3 ವಿಮಾನದ ಮೂಲಕ ಬಜ್ಪೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಂದಿನಿಂದಲೇ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿತ್ತು.
ಈ ವಿಮಾನ ನಿಲ್ದಾಣದ ಮೊದಲ ರನ್‌ವೇ 1951 ರಲ್ಲಿ ಉದ್ಘಾಟನೆಯಾದರೆ, ಎರಡನೇ ರನ್‌ವೇ 2006 ರಲ್ಲಿ ಪ್ರಾರಂಭವಾಗಿತ್ತು. ಅಲ್ಲದೇ ಮೊದಲ ಕ್ರಾಂಕ್ರೀಟ್ ರನ್‌ವೇ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ನಂತರ 2013 ರಲ್ಲಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಕಾಂಪ್ಲೆಕ್ಸ್ ಆರಂಭವಾಗಿತ್ತು.