ಸುಳ್ಯ: ನಗರದ ವಸತಿಗೃಹವೊಂದರಲ್ಲಿ ಯುವಕ-ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡ ಯುವಕ ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್(19) ಮತ್ತು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಕಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ (19) ಎಂದು ಗುರುತಿಸಲಾಗಿದೆ.
ಅ. 18 ರಂದು ರಾತ್ರಿ ಸುಳ್ಯದ ಸರ್ದನ್ ವಸತಿಗೃಹಕ್ಕೆ ಬಂದು ನಾವು ಸಂಬಂಧಿಕರು, ಊರಿಗೆ ಹೋಗಲು ಬಸ್ಸು ಇಲ್ಲಎಂದು ಹೇಳಿ ಯುವತಿಯ ದಾಖಲೆ ನೀಡಿ ರೂಮ್ ಬುಕ್ ಮಾಡಿಕೊಂಡಿದ್ದರು. ಅ. 19ರಂದು ಮಧ್ಯಾಹ್ನ ವೇಳೆಗೆ ವಸತಿಗೃಹದ ಮ್ಯಾನೇಜರ್ ರೂಮ್ ಬಳಿ ಹೋಗಿ ಕಿಟಕಿ ಬಳಿ ಬಂದು ಇಣುಕಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬಯಲಾಗಿದ್ದು, ಒಂದೇ ನೇಣಿಗೆ ಇಬ್ಬರು ಕೊರಳೊಡ್ಡಿದ್ದಾರೆ.
ಯುವಕ ದರ್ಶನ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ಕೊರೋನಾ ಬರುವ ಮೊದಲು ಇದೇ ವಸತಿಗೃಹದಲ್ಲಿರುವ ಹೋಟೆಲ್‌ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿಕೊಂಡಿದ್ದ. ಕಳೆದ 4 ದಿನದ ಹಿಂದೆ ಮನೆಯಿಂದ ಸ್ನೇಹಿತರ ಜತೆಗೆ ಪ್ರವಾಸ ಹೋಗುತ್ತೇನೆ ಎಂದು ಹೊರಟು ಬಂದಿದ್ದನು.
ನಿನ್ನೆಯ ದಿನ ತಾಯಿ ಇಂದುಮತಿಯವರು ದರ್ಶನ್‌ಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೇ ಯುವಕನ ತಾಯಿ ಯುವತಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಯುವತಿ ಆತ ಸ್ನೇಹಿತರ ಜತೆಗೆ ಟೂರ್ ಹೋಗಿದ್ದಾನೆ ಎಂದು ತಿಳಿಸಿದ್ದಾಳೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಯುವಕ ನಿನ್ನೆಯ ದಿನ ತನ್ನ ವ್ಯಾಟ್ಸಪ್ ಸ್ಟೇಟಸ್‌ನಲ್ಲಿ ಬಾರದೂರಿಗೆ ನನ್ನ ಮತ್ತು ಲವರ್‌ನ ಪಯಣ, ಇಬ್ಬರ ಪೋಟೋಗಳನ್ನು ಹಾಕಿ ಆರ್‌ಐಪಿ ಎಂದು ಬರೆದುಕೊಂಡಿದ್ದನು. ಅಲ್ಲದೇ ಇಬ್ಬರು ಜತೆಗೆ ತೆಗೆದಿದ್ದ ಹಲವು ಪೋಟೋಗಳನ್ನು ಸ್ಟೇಟಸ್‌ನಲ್ಲಿ ಹಾಕಿದ್ದನು..