ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನ ಮುತ್ತೂಟ್ ಫೈನಾನ್ಸ್‍ನಲ್ಲಿ ಭಾರಿ ದರೋಡೆ ನಡೆದಿದೆ. ಗನ್ ತೋರಿಸಿ 7 ಕೋಟಿ ಮೌಲ್ಯದ 25 ಕೆ.ಜಿ ಚಿನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ.ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ಹೊಸೂರು ಕೃಷ್ಣಗಿರಿ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ.
ಕರ್ನಾಟಕ ಗಡಿಗೆ ಹೊಂದಿಕೊಂಡಿದ್ದು, ಹೊಸೂರು-ಬೆಂಗಳೂರು ನಡುವೆ ವ್ಯಾಪಾರ-ವಿನಿಮಯ, ಓಡಾಟ ತುಸು ಹೆಚ್ಚೇ. ಶುಕ್ರವಾರ ಬೆಳಿಗ್ಗೆ 9.30ರ ವೇಳೆಗೆ ಸಿಬ್ಬಂದಿ ಮುತ್ತೂಟ್ ಫೈನಾನ್ಸ್‍ನ ಶಾಖೆಯನ್ನು ತೆರೆದು ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.ಈ ವೇಳೆ ಶಸ್ತ್ರಸಜ್ಜಿತ ಆರು ಜನರು ಮುತ್ತೂಟ್ ಫೈನಾನ್ಸ್‍ನ ಶಾಖೆ ಒಳಗೆ ನುಗ್ಗಿದ್ದಾರೆ. ಮೊದಲು ಸೆಕ್ಯುರಿಟಿ ಮೇಲೆ ಹಲ್ಲೆ ನಡೆಸಿ, ಒಳ ನುಗ್ಗಿದ ದರೋಡೆಕೋರರು, ಗನ್ ತೋರಿಸಿ ಶಾಖೆಯ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ.
ಲಾಕರ್‍ಗಳಲ್ಲಿದ್ದ 25 ಕೆ.ಜಿ ಚಿನ್ನ, 96,000 ನಗದು ಲೂಟಿ ಮಾಡಿ ಪರಾರಿಯಾಗಿದ್ದಾರೆ. ದರೋಡೆಕೋರರ ದರೋಡೆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ದರೋಡೆಕೋರರ ಪತ್ತೆಗಾಗಿ 10 ವಿಶೇಷ ತಂಡಗಳನ್ನು ರಚಿಸಲಾಗಿದೆ. ಬೆಂಗಳೂರು ಹಾಗೂ ತಮಿಳುನಾಡಿನ ವಿವಿಧ ಸ್ಥಳಗಳಿಗೆ ತೆರಳಿರುವ ತಂಡಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿವೆ.