ಬೆಂಗಳೂರು: ಮುಂದಿನ ದಿನಗಳಲ್ಲಿ ಬಿಜೆಪಿಯವರು ಸಹ ಮುನಿರತ್ನ ಅವರಿಂದ ತಕ್ಕಪಾಠ ಕಲಿಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಆರ್.ಆರ್ ನಗರ ಉಪಚುನಾವಣೆ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಡಿ.ಕೆ ಶಿವಕುಮಾರ್ ಮಾತನಾಡಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ಇನ್ನೂ ವಾಪಸ್ ತೆಗೆದಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದೆ. ಬಿಜೆಪಿ ನಾಯಕರು. ಮುನಿರತ್ನ ಅವರನ್ನು ಕರೆಯಿಸಿ ಮಾತಾಡಿ ಮುನಿರಾಜುಗೌಡ, ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣ ವಾಪಸ್ ಪಡೆಯಬಹುದಾಗಿತ್ತು. ಆದರೆ ಹಾಗೆ ಮಾಡಿಲ್ಲ ಎಂದರು.
ಪಕ್ಷ ತಾಯಿ ಇದ್ದಂತೆ ಎಂದು ಹೇಳಿದ್ದ ಮುನಿರತ್ನ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ದುಡ್ಡು ತೆಗೆದುಕೊಂಡು ಬಿಜೆಪಿ ಸೇರಿದ್ದಾರೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ನಾವು ಯಾವುದೇ ಆಮಿಷಗಳನ್ನು ಒಡ್ಡಿ ಮತ ಕೇಳುತ್ತಿಲ್ಲ. ವಿಶ್ವಾಸದಿಂದ ಕೇಳುತ್ತಿದ್ದೇವೆ. ಆದರೆ ಬಿಜೆಪಿಯವರು ಆರ್.ಆರ್. ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳಲ್ಲೂ ಕಂತೆ ಕಂತೆ ಹಣ ಹಂಚುತ್ತಿದ್ದಾರೆ. ಅವರ ಹಣ ಹಂಚಿಕೆ ಬಗ್ಗೆ ನಮಗೆ ದಾಖಲೆಗಳು ಲಭ್ಯವಾಗಿವೆ. ಶಿರಾದಲ್ಲಿ ಮನೆಗಳಿಗೆ ಸ್ಟಿಕ್ಕರ್ ಹಾಕಿ ಹಣ ಹಂಚಿದ್ದಾರೆ ಎಂದು ಆರೋಪಿಸಿದರು.
ಇನ್ನು ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ., ದರ್ಶನ್ ಓರ್ವ ಸಿನಿಮಾ ನಟ, ನನಗೂ ಪರಿಚಯ. ನಾನು ಕರೆದರು ಬಂದು ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.