ಮಂಗಳೂರು : ಯುವಕನೋರ್ವನ ಮೃತದೇಹ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಗರದ ವಿ.ಟಿ.ರೋಡ್ ಧನ್ವಂತರಿ ನಗರ ನಿವಾಸಿ ವಿಘ್ನೇಶ್ ನಾಯಕ್ (29) ಎಂಬಾತ ರವಿವಾರ ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ 2016ರಲ್ಲಿ ರಾಜ್ಯಾದ್ಯಂತ ಭಾರೀ ತಲ್ಲಣ ಮೂಡಿಸಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಹತ್ಯೆಯ ಪ್ರಮುಖ ಆರೋಪಿಯ ಮಳಿಗೆಯಲ್ಲಿ ಕೆಲಸಕ್ಕಿದ್ದ. ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣ ಕುರಿತು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ತೀರ್ಪು ಹಾಗೂ ಅಂತಿಮ ಆದೇಶವು ಸೋಮವಾರ (ನ.23) ಹೊರಬೀಳುವುದಾಗಿ ಜಿಲ್ಲಾ ನ್ಯಾಯಾಲಯದ ವೆಬ್ ಪೋರ್ಟಲ್‌ನಲ್ಲಿ ಪ್ರಕಟವಾಗಿತ್ತು. ಈ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವಿಘ್ನೇಶ್ ನಾಯಕ್ ಮೃತದೇಹ ಪತ್ತೆಯಾಗಿದೆ. ಘಟನೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಮಗ್ರ ತನಿಖೆಗೆ ಆಗ್ರಹ: ‘ಜಸ್ಟೀಸ್ ಫಾರ್ ವಿನಾಯಕ್ ಬಾಳಿಗಾ’ ಅಭಿಯಾನ ನಡೆಸುತ್ತಿರುವ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಪ್ರೊ.ನರೇಂದ್ರ ನಾಯಕ್ ಅವರು ವಿಘ್ನೇಶ್ ನಾಯಕ್ ಸಾವು ಪ್ರಕರಣವನ್ನು ‘ಅನುಮಾನಾಸ್ಪದ ಆತ್ಮಹತ್ಯೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುವಕನ ಅಸ್ವಾಭಾವಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಾಳಿಗಾ ಹತ್ಯೆ ಪ್ರಕರಣದ ಆರೋಪಿಗಳು ಪರಾರಿಯಾಗಲು ಬಳಸಿದ ಕಾರು ಕೂಡ ವಿಘ್ನೇಶ್ ನಾಯಕ್ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನಿಗೆ ಹೆಚ್ಚು ಮಾಹಿತಿ ಇತ್ತು. ಆದರೆ ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿರಲಿಲ್ಲ. ಸದ್ಯಕ್ಕೆ ವಿಚಾರಣೆಯ ಪ್ರಯತ್ನವೂ ಕೈತಪ್ಪಿ ಹೋಗಿದೆ. ಪ್ರಕರಣದಲ್ಲಿ ಆತನ ಬಾಯಿ ಮುಚ್ಚಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದಿಸಿದಂತೆಯೂ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪ್ರೊ.ನರೇಂದ್ರ ನಾಯಕ್ ಅನುಮಾನ ವ್ಯಕ್ತಪಡಿಸಿದ್ದಾರೆ.