ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಹಾಗೂ ಜೆಡಿಎಸ್ ಪಕ್ಷದ ಕೃಷ್ಣಮೂರ್ತಿ ವಿರುದ್ಧ ಭಾರೀ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಹ್ಯಾಟ್ರಿಕ್ ಗೆಲುವು ಗಳಿಸಿದ್ದಾರೆ.
ರಾಜರಾಜೇಶ್ವರಿ ನಗರದ 25ನೇ ಸುತ್ತಿನ ಮತಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 53,548 ಮತಗಳ ಅಂತರಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 58,743 ಮತಗಳನ್ನು ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿಯವರು 7772 ಮತಗಳನ್ನು ಪಡೆದಿದ್ದಾರೆ.
ಆರಂಭದಿಂದಲು ಮುನಿರತ್ನ ಅವರು ಮುನ್ನಡೆ ಸಾಧಿಸಿಕೊಂಡು ಬಂದಿದ್ದು, ಈ ಮುನ್ನಡೆಯನ್ನು ನಿರಂತರವಾಗಿ ಕಾದುಕೊಂಡು ಬಂದಿರುವ ಪರಿಣಾಮ ಇದೇ ಮೊದಲ ಬಾರಿಗೆ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಜಯಗಳಿಸಿದೆ.
ಬಿಜೆಪಿ ಮತ್ತು ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ– ಕಣ್ಣೀರ ರಾಜಕಾರಣದ ಕಾರಣದಿಂದ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಭಾರೀ ಕುತೂಹಲ ಕೆರಳಿಸಿತ್ತು. ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ನಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಬಿಜೆಪಿ ನಾಯಕರ ನಿರೀಕ್ಷೆಗೂ ಮೀರಿ ಮತದಾರರರು ಮುನಿರತ್ನ ಅವರನ್ನು ಬೆಂಬಲಿಸಿ ದ್ದಾರೆ.