Sunday, September 24, 2023
Homeಕರಾವಳಿರಾಜ್ಯದ 25 ಹೆದ್ದಾರಿ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ರಾಜ್ಯದ 25 ಹೆದ್ದಾರಿ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

- Advertisement -



Renault

Renault
Renault

- Advertisement -

ಬೆಂಗಳೂರು: ರಾಜ್ಯದ 25 ಹೆದ್ದಾರಿ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು 8 ಪೂರ್ಣಗೊಂಡ ಹೆದ್ದಾರಿಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಿದರು.

ಈ ಯೋಜನೆಗಳಲ್ಲಿ 10,904 ಕೋಟಿ ರೂ.ವೆಚ್ಚದ 1,197 ಕಿ.ಮೀ ರಸ್ತೆಗಳು ಸೇರಿವೆ.

ವಿಡಿಯೋ ಕಾನ್ಪರೆನ್ಸ್ ಮೂಲಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಿಂದ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಸಚಿವರು ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಂದರ್ಭದಲ್ಲಿ ಮಾತನಾಡಿದ ಗಡ್ಕರಿ, ಕಳೆದ ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ 900 ಕಿ.ಮೀ.ಗಿಂತ ಹೆಚ್ಚಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಸೇರಿಸಲಾಗಿದೆ. ಈಗ ಒಟ್ಟು 7,652 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ. 2,384 ಕಿ.ಮೀ ಉದ್ದದ 37,311 ಕೋಟಿ ರೂ. ವೆಚ್ಚದ ಒಟ್ಟು 71 ಕಾಮಗಾರಿಗಳು ನಡೆಯುತ್ತಿವೆ. ಇವುಗಳಲ್ಲಿ, 12,286 ಕೋಟಿ ರೂ. ವೆಚ್ಚದ 1,127 ಕಿ.ಮೀ ಉದ್ದದ ಹೊಂದಿರುವ 26 ಕಾಮಗಾರಿಗಳಲ್ಲಿ ಶೇ.70 ಕ್ಕಿಂತ ಹೆಚ್ಚಿನ ಕೆಲಸ ಮುಗಿದಿದೆ. 1257 ಕಿ.ಮೀ ಉದ್ದದ 25,025 ಕೋಟಿ ರೂ. ವೆಚ್ಚದ 45 ಕಾಮಗಾರಿಗಳಲ್ಲಿ ಶೇ 70ರವರೆಗೆ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು.

ವ್ಯಾಪಾರ ಮತ್ತು ಆರ್ಥಿಕತೆಯ ಅನುಕೂಲಕ್ಕಾಗಿ ಬಂದರುಗಳಿಗೆ ಸುಗಮ ಸಂಪರ್ಕ ಕಲ್ಪಿಸಲು, ಗೋವಾ ಗಡಿಯಿಂದ ಕೇರಳ ಗಡಿಯವರೆಗಿನ ನಾಲ್ಕು ಪಥಗಳ ರಸ್ತೆಯು, ಬಂದರು ನಗರವಾದ ಬೇಲೇಕೇರಿ, ಕಾರವಾರ ಮತ್ತು ಮಂಗಳೂರನ್ನು ಸಂಪರ್ಕಿಸಲಿದ್ದು, 278 ಕಿ.ಮೀ. ಉದ್ದದ ಈ ರಸ್ತೆ ಕಾಮಗಾರಿಯನ್ನು 3443 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದಲ್ಲದೆ, ರಸ್ತೆ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ, ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ಶಿರಡಿ ಘಾಟ್ ಎನ್ ಎಚ್ -73 ರಲ್ಲಿ ಚಾರ್ಮಡಿ ಘಾಟ್ ಮತ್ತು ಎನ್ ಎಚ್ -275 ರಲ್ಲಿ ಸಂಪಾಜೆ ಘಾಟ್ ನಲ್ಲಿ ಬೆಟ್ಟದ ಇಳಿಜಾರುಗಳಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಒದಗಿಸುವ ಮೂಲಕ ಸುರಕ್ಷತೆಯನ್ನು ಸುಧಾರಿಸುವ 115 ಕೋಟಿ ರೂ. ವೆಚ್ಚದ 3 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಮುಂಬರುವ ವರ್ಷಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಸುಮಾರು 1,16,144 ಕೋಟಿ ರೂ. ಗಳನ್ನು ಹೂಡಿಕೆ ಮಾಡಲಿದೆ. 2019-21ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 5083 ಕೋಟಿ ರೂ.ವೆಚ್ಚದ 275 ಕಿ.ಮೀ.ನ 11 ರಸ್ತೆ ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ ಎಂದು ಅವರು ಹೇಳಿದರು. ರಾಜ್ಯಕ್ಕೆ ಈವರೆಗೆ 8,330 ಕೋಟಿ ರೂ.ಗಳ ಸಿಆರ್ ಎಫ್ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಸಿಆರ್ ಎಫ್ ಅಡಿಯಲ್ಲಿ ಈ ವರ್ಷದ ಒಟ್ಟು 435 ಕೋಟಿ ರೂ.ಗಳಲ್ಲಿ 217 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷದ ಉಳಿದ 218 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಸಚಿವ ಗಡ್ಕರಿ ಘೋಷಿಸಿದರು.

ದೇಶದ ಅತಿದೊಡ್ಡ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಎಥೆನಾಲ್ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕೆಂದು ಶ್ರೀ ಗಡ್ಕರಿ ಕರೆ ನೀಡಿದರು, ದೇಶವು ಈಗಾಗಲೇ ಸಕ್ಕರೆ ಮತ್ತು ಅಕ್ಕಿಯನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತಿದೆ ಮತ್ತು ಸರ್ಕಾರದಲ್ಲಿ ಸಾಕಷ್ಟು ಸಂಗ್ರಹವಿದೆ ಎಂದು ಅವರು ಹೇಳಿದರು. ಹೆಚ್ಚುವರಿ ಸಂಗ್ರಹವನ್ನು ಎಥೆನಾಲ್ ಆಗಿ ಪರಿವರ್ತಿಸಬಹುದು, ಇದನ್ನು ವಾಹನಗಳಿಗೆ ಪರ್ಯಾಯ ಇಂಧನವಾಗಿ ಬಳಸಬಹುದು. ಇದು ರೈತರ ಆದಾಯವನ್ನು ಸುಧಾರಿಸುವುದಲ್ಲದೆ, ದೇಶಕ್ಕೆ ಸ್ಥಳೀಯ ಇಂಧನಗಳ ಮೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕೇಂದ್ರ ಸಚಿವರು ನೀಡಿದ ಎಲ್ಲ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ತಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಮತ್ತು ಅದರ ಜನರ ಜೀವನ ಶೈಲಿಯನ್ನು ಹೆಚ್ಚಿಸಲು ಬದ್ಧವಾಗಿದೆ. ತಮ್ಮ ಸರ್ಕಾರದ ಗುರಿಗಳನ್ನು ಸಾಧಿಸಲು ಕೇಂದ್ರದ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಮಾಜಿ ಪ್ರಧಾನಿ ಶ್ರೀ ಎಚ್ ಡಿ ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಶ್ಲಾಘನೀಯ. ಹೊಸ ತಂತ್ರಜ್ಞಾನವು ಅಭಿವೃದ್ಧಿಯ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಾವು ಇಂದು ನೋಡುತ್ತಿರುವುದನ್ನು ನಂಬಲಾಗುತ್ತಿಲ್ಲ ಎಂದು ಅವರು ಹೇಳಿದರು.

ಧಾರವಾಡದಿಂದ ವೆಬಿನಾರ್ ನಲ್ಲಿ ಪಾಲ್ಗೊಂಡ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ದೇಶದ ವಿವಿಧ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರತಿದಿನ ಸುಮಾರು ೩೦ ಕಿ.ಮೀ.ಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ರಾಜ್ಯಕ್ಕೆ ಪ್ರಸಕ್ತ ಸಾಲಿನಲ್ಲಿ ೨ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ ದೊರೆತಿರುವುದು ಸಂತಸ ತಂದಿದೆ ಎಂದು ಹೇಳಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ, ತಮ್ಮ ಇಲಾಖೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಅಪಾರ ಜ್ಞಾನ ಹೊಂದಿರುವ ಅವರು, ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ದೇಶದ ಭವಿಷ್ಯದ ದೂರದೃಷ್ಟಿಯೊಂದಿಗೆ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.

ಚಾಮರಾಜನಗರದಿಂದ ತಮಿಳುನಾಡು ಗಡಿ ಸಂಪರ್ಕಿಸುವ ಪುಣಜನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಆನ್ ಲೈನ್ ಮೂಲಕ ಶಂಕುಸ್ಥಾಪನೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಪುಣಜನೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾಮಗಾರಿಯಿಂದಾಗಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿಸಿದಂತಾಗಿದೆ. ಇದರಿಂದ ಚಾಮರಾಜನಗರ ಜಿಲ್ಲೆಯಲ್ಲಿ ಅಂತಾರಾಜ್ಯ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ಸಿಗುತ್ತದೆ. ೧೩.೫೩ ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದ ಅಭಿವೃದ್ದಿಗಾಗಿ ವಿಶೇಷ ಗಮನ ಹರಿಸಿದ್ದು, ಇದರ ಪರಿಣಾಮ ೮ ಸಾವಿರದ ೮೧೯ ಕಿ.ಮೀ ರಸ್ತೆ ನಿರ್ಮಾಣ ಹಾಗೂ ನವೀಕರಣ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಇದೊಂದು ಮಹತ್ವದ ಬೆಳವಣಿಗೆ ಎಂದರು. ಶರಾವತಿ ಹಿನ್ನೀರಿನಲ್ಲಿ ಬೃಹತ್ ಸೇತುವೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ೪೨೩.೧೫ ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರಿಂದ ೩ ಗಂಟೆಗಳಷ್ಟು ಪ್ರಯಾಣದ ಸಮಯ ಕಡಿಮೆಯಾಗಿದೆ ಎಂದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments