ಮಂಗಳೂರು : ನಗರದ ಕದ್ರಿ ಪೊಲೀಸ್ ಠಾಣೆಯ ಸಮೀಪದ ಕಂಪೌಂಡ್ ಗೋಡೆಯೊಂದರಲ್ಲಿ ಲಷ್ಕರ್ ತೋಯ್ಬಾ, ತಾಲಿಬಾನ್ ಪರ ಘೋಷಣೆಗಳನ್ನು ಬರೆದಿರುವ ಘಟನೆ ಮಂಗಳೂರಿನ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿವಿಧ ರೀತಿಯ ವದಂತಿಗಳು ಜನರ ನಡುವೆ ಹರಿದಾಡುತ್ತಿದೆ. ಇಂತಹ ಹೀನ ಕೃತ್ಯವನ್ನು ಎಸಗಿರುವ ತಪ್ಪಿಸತ್ಥರನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಘಟನೆಗಳು, ವದಂತಿಗಳು ದೊಡ್ಡ ರೀತಿಯ ಗಲಭೆ, ಹಿಂಸಾಚಾರಗಳಿಗೆ ಕಾರಣವಾಗಿರುವ ವಿದ್ಯಾಮಾನಗಳು ಈ ಹಿಂದೆ ಹಲವು ನಡೆದಿದೆ. ಕೋಮು ಸೂಕ್ಷ್ಮ ನಗರದಲ್ಲಿ ಇಂತಹ ಕೃತ್ಯಗಳು ಯಾವುದೇ ರೀತಿಯ ಅವಘಡಗಳಿಗೆ ಹೇತು ಆಗಬಹುದು. ಈ ಗೋಡೆ ಬರಹದ ಹಿಂದೆಯೂ ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಹೆಚ್ಚಿಸುವ, ಪರಸ್ಪರರನ್ನು ಎತ್ತಿಕಟ್ಟುವ ಉದ್ದೇಶ ಇದ್ದಂತಿದೆ. ನಗರದ ಮಧ್ಯ ಭಾಗದಲ್ಲಿ, ಪೊಲೀಸ್ ಠಾಣೆಯ ಸಮೀಪ ಇಂತಹ ಘಟನೆ ನಡೆದಿರುವುದು ಆತಂಕವನ್ನು ಸಹಜವಾಗಿ ಹೆಚ್ಚಿಸಿದೆ. ನಗರದಲ್ಲಿ ಕೊಲೆ, ಸುಲಿಗೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಲಷ್ಕರ್ ಪರ ಗೋಡೆಬರಹ ಪೊಲೀಸ್ ಠಾಣೆಯ ಸಮೀಪವೇ ಪ್ರತ್ಯಕ್ಷಗೊಂಡಿರುವುದು ಸಹಜವಾಗಿ ಕಾನೂನು ಆಡಳಿತದ ಕುರಿತು ಜನರಲ್ಲಿ ಅತೃಪ್ತಿ ಮೂಡಿಸಿದೆ. ಪೊಲೀಸ್ ಇಲಾಖೆ ತಕ್ಷಣವೇ ಈ ಕೃತ್ಯ ಎಸಗಿರುವ ತಪ್ಪಿತಸ್ಥರನ್ನು ಬಂಧಿಸಬೇಕು, ಘಟನೆಯ ಹಿಂದಿರುವ ಹುನ್ನಾರಗಳನ್ನು ಬಯಲಿಗೆಳೆಯಬೇಕು, ಜನರ ಆತಂಕವನ್ನು ದೂರ ಮಾಡಬೇಕು ಎಂದು ಡಿವೈಎಫ್ಐ ದ ಕ ಜಿಲ್ಲಾ ಸಮಿತಿ ತಮ್ಮಲ್ಲಿ ಮನವಿ ಮಾಡುತ್ತದೆ.
ಪೊಲೀಸ್ ಆಯುಕ್ತರಿಗೆ ಮನವಿ ನೀಡಿದ ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಸಂತೋಷ್ ಬಜಾಲ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಸಾದಿಕ್ ಕಣ್ಣೂರು, ಅಶ್ರಫ್ ಹರೇಕಳ, ಮನೋಜ್ ಉರ್ವಸ್ಟೋರ್, ನಿತಿನ್ ಬಂಗೇರ ಉಪಸ್ಥಿತರಿದ್ದರು.