ಮಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಾಲ್ಕು ಗೋಡೆಗಳ ಮಂದಿರ ನಿರ್ಮಾಣ ಕಾರ್ಯ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಪುನರುತ್ಥಾನ ಇದರ ಜೊತೆಜೊತೆಗೆ ಆಗಬೇಕಾಗಿದೆ. ಭಗವಂತನ ಎಚ್ಚರಿಕೆಯೊಂದಿಗೆ ಬದುಕನ್ನು ಸಾಗಿಸುವ ಕಾರ್ಯ ಆಗಬೇಕಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಪರಿಷತ್ ನ ಮಾರ್ಗದರ್ಶನ ಮಂಡಲದ ಸಮಾವೇಶ, ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ್ದ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆಗಬೇಕೆಂಬುದು ಭಾರತೀಯರ ಶತಶತಮಾನದ ಕನಸು. ಈ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.
ರಾಮಜನ್ಮಭೂಮಿ ನ್ಯಾಸ ಮಂಚ ಟ್ರಸ್ಟ್ ನಿಂದ ಒಂದಿಷ್ಟು ಮಂದಿರ ನಿರ್ಮಾಣದ ಕಾರ್ಯಗಳು ನಡೆದಿದೆ. ಇಟ್ಟಿಗೆ ಪೂಜೆ, ಮಂದಿರಕ್ಕೆ ಬೇಕಾದ ಶಿಲಾಮಯ ಕೆತ್ತನೆ ಕಾರ್ಯ ಸಿದ್ಧವಾಗಿದೆ. ಈ ಬಾರಿ ಮಂದಿರದ ವಿಸ್ತೀರ್ಣವನ್ನು ಹಿಂದಿಗಿಂತ ಒಂದು ಕೆಳ ಅಂತಸ್ತನ್ನು ಹೆಚ್ಚಿಸಿ ಇನ್ನೂ ಭವ್ಯ ಸ್ವರೂಪ ನೀಡಲಾಗಿದೆ ಎಂದು ಹೇಳಿದರು.