ಮಂಗಳೂರು : ಸಮುದ್ರದಲ್ಲಿ ಮೀನಿಗೆ ಬಲೆ ಹಾಕುತ್ತಿದ್ದ ಸಂದರ್ಭ ಮೀನಿನ ಬಲೆಗೆ ಸಿಕ್ಕಿಕೊಂಡು ಮೀನುಗಾರರೊಬ್ಬರು ಸಮುದ್ರದ ಮಧ್ಯೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಬೈಕಂಪಾಡಿ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ (32) ಮೃತ ವ್ಯಕ್ತಿ.
ರವಿವಾರ ನವೀನ್ ಕರ್ಕೇರ ಸಮುದ್ರದಲ್ಲಿ ಮೀನಿಗೆ ಬಲೆ ಹಾಕುತ್ತಿದ್ದರು. ಈ ವೇಳೆ ಬಲೆಗೆ ಕಾಲು ಬೆರಳು ಸಿಲುಕಿದ್ದು ನವೀನ್ ನೀರಿಗೆ ಬಿದ್ದು ಮುಳುಗಿದ್ದಾರೆ. ನವೀನ್ ಈಜು ಬಲ್ಲವರಾಗಿದ್ದದೂ ಕಾಲು ಬಲೆಯಲ್ಲಿ ಸಿಲುಕಿದ ಕಾರಣ ದಡ ಸೇರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಆಸ್ಪತ್ರೆ ತಲುಪುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ನವೀನ್ ಕರ್ಕೇರ ಅವಿವಾಹಿತ. ತಂದೆ ನಿಧನ ಹೊಂದಿದ್ದಾರೆ. ನವೀನ್ ಅವರ ಮೂವರು ಸಹೋದರರು ಹದಿಹರೆಯದಲ್ಲೇ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಓರ್ವ ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಇನ್ನೋರ್ವ ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಮತ್ತೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದರು. ಏಕೈಕ ಆಸರೆಯಾಗಿದ್ದ ನವೀನ್ ಸಾವಿನಿಂದ ವೃದ್ಧ ತಾಯಿ ಕಂಗಾಲಾಗಿದ್ದಾರೆ.
ಸ್ನೇಹಜೀವಿಯಾಗಿದ್ದ ನವೀನ್ ಅವರು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ನವಜ್ಯೋತಿ ಸಂಸ್ಥೆಯ ಸದಸ್ಯರಾಗಿದ್ದರು.