ಕಾಪು : ಕಾರಿನಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯನ್ನುಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಆಹಾರ ನಿರೀಕ್ಷಕರ ನೇತೃತ್ವದ ತಂಡ ರವಿವಾರ ಬೆಳಗ್ಗೆ ಕಟಪಾಡಿ ಕೋಟೆ ಗ್ರಾಮದ ಸುಮಿತ್ರಾ ಜನರಲ್ ಸ್ಟೋರ್ ಸಮೀಪ ಬಂಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಕೋಟೇಶ್ವರ ಮೂಡು ಗೋಪಾಡಿ ನಿವಾಸಿ ಇಮ್ತಿಯಾಜ್ ಅಹಮ್ಮದ್(36), ಕುಂದಾಪುರ ಮಾವಿನ ಕಟ್ಟೆಯ ಮುಹಮ್ಮದ್ ನಾಸೀರ್(27), ಕೋಟೇಶ್ವರ ಹಳೆ ಅಳಿವೆ ನಿವಾಸಿ ಮುಹಮ್ಮದ್ ತ್ವಾಹಿಬ್(29) ಬಂಧಿತ ಆರೋಪಿಗಳು.
ಸರಕಾರದಿಂದ ಜನರಿಗೆ ದೊರೆಯುವ ಉಚಿತ ಅನ್ನಭಾಗ್ಯದ ಅಕ್ಕಿ ಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆರೋಪಿಗಳು ಇಕೋ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕಾಪು ಆಹಾರ ನಿರೀಕ್ಷಕ ಟಿ.ಎಂ.ಲೀಲಾನಂದ ಹಾಗೂ ಕಾಪು ಪೊಲೀಸರು ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರಿನಲ್ಲಿದ್ದ 6120ರೂ. ಮೌಲ್ಯದ ಒಟ್ಟು 560 ಕೆ.ಜಿ. ತೂಕದ 16 ಅಕ್ಕಿ ಚೀಲಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 2ಲಕ್ಷ ರೂ. ಮೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.