ಮಂಗಳೂರು : ರಾಜ್ಯಾಧ್ಯಕ್ಷರಾದ ಬಳಿಕ ನಳಿನ್ ಕುಮಾರ್ ಕಟೀಲ್ ಅವರು ಪಕ್ಷ ಬಲಪಡಿಸಿದ್ದಾರೆ. ಎರಡು ವರ್ಷಗಳ ಬಳಿಕ ಬಿಜೆಪಿ ಸಂಪೂರ್ಣ ಬಹುಮತ ದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ. 2014ರಲ್ಲಿ ಬಿಜೆಪಿ 104 ಸೀಟ್ ಗಳಿಸಿತ್ತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 18 ಮಂದಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿಗೆ ಸೇರಿದ್ದರು. 18 ಜನರ ಸಹಕಾರದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಬಿಜೆಪಿ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಅಭ್ಯರ್ಥಿಗಳ ಗೆಲುವಿಗೆ ಸಂಪೂರ್ಣ ಪರಿಶ್ರಮವನ್ನು ಹಾಕಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಮಂಗಳೂರಿನ ಸಿವಿ ರಮಣ ಪೈ ಹಾಲ್‌ನಲ್ಲಿ ನವೆಂಬರ್ 5, ಗುರುವಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ. ಆರು ತಿಂಗಳಿನಲ್ಲಿ ಕರಾವಳಿಯಲ್ಲಿ ಬದಲಾವಣೆಯಾಗಲಿದೆ. ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆಗೂ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಲವ್ ಜಿಹಾದ್ ಹೆಸರಲ್ಲಿ ಮತಾಂತರವಾಗುತ್ತಿದೆ. ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಈ ವ್ಯವಸ್ಥೆ ಕೊನೆ ಮಾಡುತ್ತೇವೆ. ಮತಾಂತರದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕರಾವಳಿಯಲ್ಲಿ ಆಂತರಿಕ ಭದ್ರತೆಗೆ ಪ್ರಾಶಸ್ತ್ಯ ಕೊಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಡ್ರಗ್ಸ್ ಮಾಫಿಯಾ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮಟ್ಟಹಾಕಲಾಗುತ್ತಿದೆ. ಡ್ರಗ್ಸ್ ಮುಕ್ತ ರಾಜ್ಯಕ್ಕಾಗಿ ಬಿಗಿಯಾದ ಕ್ರಮ ಕೈಗೊಂಡಿದ್ದೇವೆ ಎಂದರು.
“ಆರ್.ಆರ್ ನಗರದಲ್ಲಿ ಬಿಜೆಪಿಗೆ 40 ಸಾವಿರ ಮತಗಳ ಅಂತರದ ಗೆಲುವಾಗಲಿದೆ. ಶಿರಾದಲ್ಲಿ 25 ಸಾವಿರ ಮತಗಳ ಅಂತರದ ಗೆಲುವಾಗಲಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಯನೀಯ ಸೋಲನ್ನು ಅನುಭವಿಸುತ್ತದೆ. 10ನೇ ತಾರೀಕಿನಂದು ಫಲಿತಾಂಶದಲ್ಲಿ ವಿಪಕ್ಷಗಳಿಗೆ ಉತ್ತರ ಸಿಗಲಿದೆ” ಎಂದು ಸಿಎಂ ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದರು.
ದೇಶ ಮೋದಿ ನೇತೃತ್ವದಲ್ಲಿ ಸಾಗಬೇಕು. ಈ ಅವಧಿ ಮುಗಿದ ಮೇಲೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ರಾಜ್ಯದಲ್ಲೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು. ಯಾವ ಚುನಾವಣೆಯನ್ನೂ ಹಗುರವಾಗಿ ಕಾಣಲು ಸಾಧ್ಯವಿಲ್ಲ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಗೆಲ್ಲುವುದು ಪಕ್ಷ ಸಂಘಟನೆಗೆ ಮುಖ್ಯ ಎಂದರು.
ಮೀನುಗಾರಿಕೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುತ್ತೇವೆ. ಮಂಗಳೂರು ನಗರ ಆಡಳಿತಕ್ಕೆ 125 ಕೋಟಿ ರೂ ಅನುದಾನ ಸಿಗಲಿದೆ. ಈಗಾಗಲೇ 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಉತ್ತಮ ಕೆಲಸವಾಗುತ್ತಿದೆ” ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಡಿ ವಿ ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ. ಉಪಮುಖ್ಯಮಂತ್ರಿ ಗೋವಿಂದ ಕರಜೋಲಾ, ರಾಜ್ಯ ಸಚಿವರಾದ ಆರ್.ಅಶೋಕ್, ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ, ಡಿಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಇತರರು ಉಪಸ್ಥಿತರಿದ್ದರು.