ಮಂಗಳೂರು, ಫೆ.11: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ರ್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.
ಕಣಚೂರು ಮೆಡಿಕಲ್ ಕಾಲೇಜಿನ ಬಿಪಿಎಡ್ ವಿಭಾಗದಲ್ಲಿ ಐದು ಮಂದಿ ಕಿರಿಯ ವಿದ್ಯಾರ್ಥಿಗಳಿಗೆ ಅದೇ ವಿಭಾಗದ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿದ್ದರು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ 18 ಮಂದಿ ವಿದ್ಯಾರ್ಥಿಗಳ ವಿರುದ್ಧ ಉಳ್ಳಾಲ ಠಾಣೆಗೆ ಫೆ.8ರಂದು ದೂರು ನೀಡಿತ್ತು.
ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಇಂದು 11 ಮಂದಿಯನ್ನು ಬಂಧಿಸಿದ್ದಾರೆ. ಮೊಹಮ್ಮದ್ ಶಮ್ಮಾಸ್, ರೋಬಿನ್ ಬಿಜು, ಆಲ್ವಿನ್ ಜಾಯ್, ಜಾಬಿನ್ ಮಹ್ರೂಫ್, ಜೆರೋನ್ ಸಿರಿಲ್, ಜಾಫಿನ್ ರಾಯ್ಚನ್, ಮಹ್ಮದ್ ಸೂರಜ್, ಆಶಿನ್ ಬಾಬು, ಅಬ್ದುಲ್ ಬಸಿತ್, ಅಬ್ದುಲ್ ಅನಾಸ್ ಮಹಮ್ಮದ್, ಅಕ್ಷಯ್ ಕೆ.ಎಸ್ ಬಂಧಿತರಾಗಿದ್ದು, ಎಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ. ಇನ್ನೂ ಏಳು ಮಂದಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇವರು ಫೆ.5ರಂದು ಕಾಲೇಜಿನಲ್ಲಿ ಈ ಸಾಲಿನಲ್ಲಿ ತರಗತಿ ಸೇರ್ಪಡೆಯಾಗಿದ್ದ ಕಿರಿಯ ವಿದ್ಯಾರ್ಥಿಗಳನ್ನು ತಮ್ಮ ತರಗತಿಗೆ ಕರೆಸಿಕೊಂಡು ತಲೆ ತಗ್ಗಿಸಿ ನಿಲ್ಲಿಸುವುದು, ಮೀಸೆ ತೆಗೆಸುವಂತೆ ದಬಾಯಿಸುವುದು, ಅವರನ್ನು ತಳ್ಳಿಕೊಂಡು ವಾರ್ನ್ ಮಾಡುತ್ತಾ ಕೀಟಲೆ ಮಾಡುತ್ತಿದ್ದರು. ಈ ಬಗ್ಗೆ ನೊಂದ ವಿದ್ಯಾರ್ಥಿಗಳು ಬಿಪಿಎಡ್ ಕೋರ್ಸ್ ವಿಭಾಗ ಪ್ರಮುಖರಲ್ಲಿ ಹೇಳಿಕೊಂಡಿದ್ದರು. ವಿಭಾಗ ಮುಖ್ಯಸ್ಥ ಜಾರ್ಜ್ ಕಾಲೇಜಿನ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದು, ಪೊಲೀಸರಿಗೆ ದೂರು ನೀಡಲಾಗಿತ್ತು.
ಇತ್ತೀಚೆಗೆ ಅಡ್ಯಾರಿನ ವಳಚ್ಚಿಲ್ ನಲ್ಲಿರುವ ಶ್ರೀನಿವಾಸ ಕಾಲೇಜಿನಲ್ಲಿ ಇದೇ ರೀತಿಯ ರ್ಯಾಗಿಂಗ್ ಪ್ರಕರಣ ನಡೆದಿತ್ತು. ಕಿರಿಯ ವಿದ್ಯಾರ್ಥಿಗಳನ್ನು ತರಗತಿಗೆ ಕರೆಸ್ಕೊಂಡು ಕೀಟಲೆ ನಡೆಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದರು. ಇದೀಗ ಒಂದೇ ತಿಂಗಳ ಅಂತರದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ