ಮಂಗಳೂರು, ಫೆ.26: ಮಂಗಳೂರು ಮಹಾನಗರ ಪಾಲಿಕೆಯ ಎರಡನೇ ಅವಧಿಯ ಮೇಯರ್ ಸ್ಥಾನಕ್ಕೆ ಮಾರ್ಚ್ 2ರಂದು ಚುನಾವಣೆ ನಡೆಯಲಿದ್ದು, ಯಾರು ಗಾದಿಗೆ ಏರುತ್ತಾರೆಂಬ ಬಗ್ಗೆ ಕುತೂಹಲ ಕೇಳಿಬಂದಿದೆ. ಈ ಬಾರಿ ಮೇಯರ್ ಗಾದಿ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವುದರಿಂದ ಹಲವರು ಬಿಜೆಪಿ ನಾಯಕರ ಮೂಲಕ ಲಾಬಿಯಲ್ಲಿ ತೊಡಗಿದ್ದಾರೆ.
ಮೊದಲ ಅವಧಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಅಧಿಕಾರಾವಧಿ ಫೆ.28ಕ್ಕೆ ಕೊನೆಗೊಳ್ಳುತ್ತಿದೆ. ಮೊದಲ ಅವಧಿಯಲ್ಲಿ ಮೇಯರ್ ಆಗಿ ದಿವಾಕರ ಪಾಂಡೇಶ್ವರ ಮತ್ತು ಉಪ ಮೇಯರ್ ಆಗಿ ವೇದಾವತಿ ಆಯ್ಕೆಯಾಗಿದ್ದರು. ಹೀಗಾಗಿ ಹೊಸತಾಗಿ ಮೇಯರ್ ಗದ್ದುಗೆಯೇರಲು ಹಲವರು ಕಾತುರದಲ್ಲಿದ್ದಾರೆ.
ಮೇಯರ್ ಸ್ಥಾನ ಈ ಬಾರಿ ಸಾಮಾನ್ಯ ಮತ್ತು ಉಪ ಮೇಯರ್ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಪಾಲಿಕೆಯಲ್ಲಿ ಸದಸ್ಯರಾಗಿರುವ ಎಲ್ಲರಿಗೂ ಅರ್ಹತೆ ಇರುತ್ತದೆ. ಆದರೆ, ಸಾಮಾನ್ಯ ಸ್ಥಾನಕ್ಕೆ ಬರುವ ಸಂದರ್ಭದಲ್ಲಿ ಹಿರಿಯ ಸದಸ್ಯರನ್ನು ಅದರಲ್ಲೂ ಇತರೇ ಮೀಸಲಾತಿ ಸಿಗದವರನ್ನು ಆಯ್ಕೆ ಮಾಡುತ್ತಾರೆ. ಈ ನೆಲೆಯಲ್ಲಿ ನೋಡಿದರೆ, ಪ್ರೇಮಾನಂದ ಶೆಟ್ಟಿ ಮಾತ್ರ ಸೀನಿಯರ್ ವ್ಯಕ್ತಿ. ಅವರು ಮಂಗಳಾದೇವಿ ವಾರ್ಡ್ ನಲ್ಲಿ ಸತತ ಐದು ಬಾರಿಗೆ ಕಾರ್ಪೊರೇಟರ್ ಆಗಿದ್ದಾರೆ. ಹೀಗಾಗಿ ಈ ಬಾರಿ ಪ್ರೇಮಣ್ಣನಿಗೇ ಮೇಯರ್ ಅನ್ನುವ ಮಾತು ಕೇಳಿಬರುತ್ತಿದೆ. ಆದರೆ, ಸೈಲಂಟ್ ಆಗಿರುವ ಪ್ರೇಮಾನಂದರನ್ನು ಹಿಂದಿಕ್ಕಲು ಹಲವರು ತಯಾರಿಯಲ್ಲಿದ್ದಾರೆ.
ಇನ್ನು ಸುಧೀರ್ ಶೆಟ್ಟಿ (ಕೊಡಿಯಾಲ್ ಬೈಲ್) ಮೂರು ಅವಧಿಗೆ ಗೆದ್ದು ಎರಡನೇ ಸೀನಿಯರ್ ಆಗಿದ್ದರೆ, ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಶರತ್ ಕುಮಾರ್ (ಕುಂಜತ್ ಬೈಲ್) ಮತ್ತು ಜಯಾನಂದ ಅಂಚನ್ (ಯೆಯ್ಯಾಡಿ) ಎರಡು ಅವಧಿಗೆ ಗೆಲುವು ಕಂಡಿದ್ದಾರೆ. ಇದೇ ವೇಳೆ, ಮೇಯರ್ ಸ್ಥಾನ ಮಂಗಳೂರು ವಿಧಾನಸಭಾ ಕ್ಷೇತ್ರದ ದಕ್ಷಿಣಕ್ಕೆ ಕೊಡಬೇಕೋ, ಉತ್ತರಕ್ಕೆ ಕೊಡಬೇಕೋ ಎನ್ನುವ ಬಗ್ಗೆ ನಿರ್ಧಾರ ಆಗಿಲ್ಲ. ಕಳೆದ ಅವಧಿಯಲ್ಲಿ ದಕ್ಷಿಣ ಕ್ಷೇತ್ರದ ಪಾಂಡೇಶ್ವರ ವಾರ್ಡಿಗೆ ಮೇಯರ್ ಸ್ಥಾನ ಸಿಕ್ಕಿತ್ತು.
ಗೆದ್ದವರ ಪೈಕಿ ನೋಡಿದರೆ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ 22 ಕ್ಷೇತ್ರಗಳಲ್ಲಿ 20 ಮಂದಿ ಗೆಲುವು ಕಂಡಿದ್ದರು. ಹೀಗಾಗಿ ಶಾಸಕ ಭರತ್ ಶೆಟ್ಟಿಯ ಕೈಮೇಲಾಗಿತ್ತು. ದಕ್ಷಿಣ ಕ್ಷೇತ್ರದಲ್ಲಿ 38 ಕ್ಷೇತ್ರಗಳಲ್ಲಿ 24 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಈ ಲೆಕ್ಕಾಚಾರದ ಪ್ರಕಾರ, ಈ ಬಾರಿ ಮಂಗಳೂರು ಉತ್ತರಕ್ಕೆ ಮೇಯರ್ ಸ್ಥಾನ ನೀಡಬೇಕೆಂಬ ಲಾಬಿಯನ್ನು ಶಾಸಕ ಭರತ್ ಶೆಟ್ಟಿ ಮಾಡುತ್ತಿದ್ದಾರೆ. ಆದರೆ, ಪ್ರೇಮಾನಂದ ಶೆಟ್ಟಿಯನ್ನು ಪರಿಗಣಿಸಿದರೆ ಉತ್ತರಕ್ಕೆ ಮೇಯರ್ ಸ್ಥಾನ ದಕ್ಕುವ ಸಾಧ್ಯತೆ ಇಲ್ಲ. ದಕ್ಷಿಣಕ್ಕೆ ಮೇಯರ್ ಪಟ್ಟ ಸಿಕ್ಕಿದರೆ, ಉಪ ಮೇಯರ್ ಸ್ಥಾನಕ್ಕೆ ಉತ್ತರದ ಮಹಿಳೆಯನ್ನು ಪರಿಗಣಿಸುತ್ತಾರೆ.
ಮಹಿಳಾ ಸದಸ್ಯರ ಪೈಕಿ ನಾಲ್ಕು ಮಂದಿ ಮಾತ್ರ ಎರಡು ಅವಧಿಗೆ ಗೆದ್ದವರಿದ್ದಾರೆ. ಮಂಗಳೂರು ಉತ್ತರದಲ್ಲಿ ಹೇಮಾವತಿ ರಘು ಸಾಲ್ಯಾನ್ ಮತ್ತು ಸುಮಿತ್ರಾ ಕುರಿಯ ಇದ್ದರೆ, ದಕ್ಷಿಣದಲ್ಲಿ ಶಕೀಲಾ ಕಾವ ಮತ್ತು ಪೂರ್ಣಿಮಾ ಇದ್ದಾರೆ. ಉಳಿದ ಮಹಿಳಾ ಸದಸ್ಯರೆಲ್ಲ ಹೊಸಬರು. ಈ ಪೈಕಿ ಒಬ್ಬರಿಗೆ ಉಪ ಮೇಯರ್ ಸ್ಥಾನ ದಕ್ಕುವುದು ಖಚಿತ. ಆದರೆ, ಇದೇನಿದ್ದರೂ ಪಕ್ಷದ ಜಿಲ್ಲಾ ಘಟಕ ಯಾರು ಮೇಯರ್, ಉಪ ಮೇಯರ್ ಆಗುತ್ತಾರೆಂಬ ಬಗ್ಗೆ ನಿರ್ಣಯ ಮಾಡಲಿದೆ.
ಈಗಾಗ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಅವರಲ್ಲಿ ಮೊದಲ ಸುತ್ತಿನ ಚರ್ಚೆ ನಡೆಸಲು ಸೂಚನೆ ನೀಡಿದ್ದಾಗಿ ಮಾಹಿತಿ ಇದೆ. ಶನಿವಾರ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧಾರ ಹೊರಬೀಳಲಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಉತ್ತರ ಶಾಸಕ ಭರತ್ ಶೆಟ್ಟಿ ಇವರಿಬ್ಬರ ನಿಲುವು ಮತ್ತು ಪಕ್ಷದ ಪ್ರಮುಖರ ನಿಲುವು ಮೇಯರ್ ಆಯ್ಕೆಯಲ್ಲಿ ನಿರ್ಣಾಯಕವಾಗಲಿದೆ.
ಒಟ್ಟು 60 ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಮತ್ತು ಎಸ್ಡಿಪಿಐ ಎರಡು ಸ್ಥಾನಗಳನ್ನು ಹೊಂದಿದೆ. ಬಿಜೆಪಿಗೆ ಗರಿಷ್ಠ ಬಹುಮತ ಇರುವುದರಿಂದ ಪ್ರತಿಪಕ್ಷಕ್ಕೆ ಮೇಯರ್ ಸ್ಥಾನದ ವಿಚಾರದಲ್ಲಿ ಯಾವುದೇ ಹಕ್ಕು ಸ್ಥಾಪನೆಗೆ ಈ ಬಾರಿ ಅವಕಾಶ ಇಲ್ಲ.