ಬೆಳಗಾವಿ, ಫೆಬ್ರವರಿ 14; “ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ. ನೀವು ನಂಬಲು ಆಗಲ್ಲಾ ಅಂತ ದೊಡ್ಡ ನಾಯಕರು ಬಿಜೆಪಿ ಬರಲು ತಯಾರಿದ್ದಾರೆ” ಎಂದು ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಭಾನುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭ ನಡೆಯಿತು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ರಾಜಕಾರಣದಲ್ಲಿ ಅನುಭವಬೇಕು ಮಾತನಾಡುವಾಗ ಹುಷಾರಾಗಿ ಮಾತಾಡಿ.
ಒಬ್ಬ ಹೆಣ್ಣು ಮಗಳಿದ್ದಾಳೆ, ಅವರಿಗೆ ದೇವರು ಒಳ್ಳೆಯದು ಮಾಡಲಿ. ತಲೆ ಕೆಡಿಸಿಕೊಂಡು ಮಾತಾಡಿದರೆ ಬಹಳ ಕಷ್ಟ ಆಗುತ್ತದೆ. ಅವರ ಬಗ್ಗೆ ನಾವು ಕೆಟ್ಟದು ಮಾತನಾಡುವುದಿಲ್ಲ. ನೀವು ಮಾತಾಡಬೇಡಿ” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ತಿರುಗೇಟು ನೀಡಿದರು.
“ನಾವು ಬಿಜೆಪಿಯಲ್ಲಿ ಆನಂದದಿಂದ ಕೆಲಸ ಮಾಡುತ್ತಿದ್ದೇವೆ. 17 ಜನರು ಶಾಸಕರು ಬಿಜೆಪಿಯಲ್ಲಿ ಗಟ್ಟಿಯಾಗಿರುತ್ತೇವೆ. ಕಾಂಗ್ರೆಸ್‌ನಲ್ಲಿ ನಮ್ಮನ್ನ ಮೂಲೆಯಲ್ಲಿ ಕೂರಿಸಿದ್ದರು. ಸಿದ್ದರಾಮಯ್ಯ ಜೊತೆಗೆ ನಾವು ಇಂದಿಗೂ ಮಾತನಾಡುತ್ತೇವೆ. ಸಿದ್ದರಾಮಯ್ಯ ನಮ್ಮ ನಾಯಕ” ಎಂದರು.
“ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ. ನೀವು ನಂಬಲು ಆಗಲ್ಲಾ ಅಂತ ದೊಡ್ಡ ನಾಯಕರು ಬಿಜೆಪಿ ಬರಲು ತಯಾರಿದ್ದಾರೆ. ಟಾಪ್ 1 ರಿಂದ 5 ವರೆಗಿನ ಕಾಂಗ್ರೆಸ್ ನಾಯಕರನ್ನು ಕರೆತರುತ್ತೇನೆ. ಅವರ ಹೆಸರನ್ನು ಕೇಳಿದರೆ ನೀವು ಕೂಡ ಗಾಬರಿಯಾಗುತ್ತೀರಿ” ಎಂದು ಹೊಸ ಬಾಂಬ್ ಸಿಡಿಸಿದರು.
“ಕಾಂಗ್ರೆಸ್‌ನ ಮಹಾನ್ ನಾಯಕರನ್ನು ಬಿಜೆಪಿಗೆ ಕರೆ ತರುತ್ತೇನೆ. ನಾವು ಕಾಂಗ್ರೆಸ್‌ಗೆ ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುತ್ತೇವೆ” ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸವಾಲು ಹಾಕಿದರು.
ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ, “ರಮೇಶ್ ಜಾರಕಿಹೊಳಿ ಮಾತಾಡಿದರೆ ಆ ಕೆಲಸ ಮಾಡುತ್ತಾರೆ. ನೀವೆಲ್ಲಾ ಹುಲಿ ಜೊತೆಗೆ ಇರಿ ಕುರಿ ಜೊತೆಗೆ ಇರಬೇಡಿ. ರಾಮ ಮಂದಿರ ಕಟ್ಟುತ್ತಿರುವುದು ನರೇಂದ್ರ ಮೋದಿ. ಇದು ಕಾಂಗ್ರೆಸ್‌ನವರಿಗೆ ಸಾಧ್ಯವಿಲ್ಲ” ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮಾತನಾಡಿ, “ಉದ್ಯೋಗ ಖಾತ್ರಿ ನಾನೇ ತಂದಿದ್ದೇನೆ ಅಂತಾ ಕೆಲವರು ಹೇಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರ ತಂದಿರುವುದು. ಗೋಕಾಕ್‌ಗೆ ಕೊಟ್ಟಷ್ಟು ಅನುದಾನ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನೀಡಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದೆ” ಎಂದು ಹೇಳಿದರು.