ಮಂಗಳೂರು : ಮೂರು ಬಾರಿ ಶಾಸಕರಾಗಿದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಜ್ಜನ ರಾಜಕಾರಣಿಯಾಗಿರುವ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದದ ಮೂಲಕ ಸಭಾಪತಿ ಸ್ಥಾನದಿಂದ ರಾಜೀನಾಮೆ ಪಡೆಯಲು ಯತ್ನಿಸುತ್ತಿರುವ ದ.ಕ. ಜಿಲ್ಲೆಗೆ ಹಾಗೂ ಬಂಟ ಸಮುದಾಯಕ್ಕೆ ಮಾಡುತ್ತಿರುವ ಅವಮಾನ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಆರೋಪಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಭಾಪತಿಯವರ ಅಧಿಕಾರವಾಧಿ ಮುಗಿಯದೆ ಅವರನ್ನು ರಾಜೀನಾಮೆ ಕೊಡಿಸುವ ಅಥವಾ ಕೆಳಗಿಸುವ ಪ್ರಯತ್ನ ನಡೆದಿಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್ ಆ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.
ಪ್ರತಾಪ್‌ಚಂದ್ರ ಶೆಟ್ಟಿ ಅಗರ್ಭ ಶ್ರೀಮಂತರಾಗಿದ್ದು, ವಿಜಯ ಬ್ಯಾಂಕ್‌ನ ಅಧಿಕಾರಿಯಾಗಿದ್ದಾಗ ರಾಜಕೀಯ ಸೇವೆಯ ಉದ್ದೇಶದಿಂದ ಕೆಲಸ ತೊರೆದವರು.
ಮೂರು ಬಾರಿ ಶಾಸಕರಾಗಿ ಜನ ಸೇವೆ ಸಲ್ಲಿಸಿದ್ದರೂ ಮಂತ್ರಿಗಿರಿಗಾಗಿ ಹಾತೊರೆದವರಲ್ಲ. ಭ್ರಷ್ಟಾಚಾರ ರಹಿತ ಹೆಮ್ಮೆಯ ರಾಜಕಾರಣಿಗೆ ಈ ರೀತಿ ಅವಮಾನ ಮಾಡುತ್ತಿರುವುದನ್ನು ಕಂಡು ಬೇಸರವಾಗುತ್ತಿದೆ. ಅಧಿಕಾರ ದಾಹದಿಂದ ಬಿಜೆಪಿ ಹಾಗೂ ಜೆಡಿಎಸ್ ಈ ಕೃತ್ಯ ನಡೆಸುತ್ತಿದೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ರಾಜೀನಾಮೆಗೆ ಮುಂದಾಗಿಸಿರುವ ಈ ಬೆಳವಣಿಗೆ ಕಂಡು ಕೇಳರಿಯದ ಘಟನೆಗೆ ಸಾಕ್ಷಿಯಾಗುತ್ತಿದೆ. ಇದು ಬಂಟ ಸಮುದಾಯಕ್ಕೆ ಮಾಡಲಾಗುತ್ತಿರುವ ವಿಶ್ವಾಸದ್ರೋಹ ಎಂದರು.
ಗೋಷ್ಠಿಯಲ್ಲಿ ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಉಸ್ಥಿತರಿದ್ದರು.