ಹಾಸನ, ಫೆಬ್ರವರಿ 21; ಹಾಸನ ನಗರದ ಹೊರವಲಯದಲ್ಲಿ ಮುಂಜಾನೆ ಭೀಕರ ರಸ್ತೆ ಅಪಘಾತ ನಡೆದಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ.
ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಶಾಂತಿಗ್ರಾಮದ ಸಮೀಪದ ಕೆಂಚಟ್ಟಳ್ಳಿ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಅಘಫಾತ ನಡೆದಿದೆ. ಟಾಟಾ ಸುಮೋಗೆ ಹಿಂದಿನಿಂದ ಬಂದು ಕ್ವಾಲೀಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕ್ವಾಲೀಸ್ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಎಲ್ಲರೂ ಕೆಜಿಎಫ್ ಮೂಲದವರಾಗಿದ್ದು, ಉಡುಪಿಗೆ ಮದುವೆಗೆಂದು ಹೊರಟಿದ್ದರು.
ಅಪಘಾತದ ತೀವ್ರತೆಗೆ ಟಾಟಾ ಸುಮೋ ಪಲ್ಟಿಯಾಗಿದೆ. ಅದರಲ್ಲಿದ್ದ 10 ಮಂದಿ ಗಾಯಗೊಂಡಿದ್ದಾರೆ. ರೋಡ್ ಹಂಪ್ ಬಳಿ ಟಾಟಾ ಸುಮೋ ನಿಧಾನವಾದಾಗ ಹಿಂದಿನಿಂದ ವೇಗವಾಗಿ ಬಂದ ಕ್ವಾಲೀಸ್ ಡಿಕ್ಕಿ ಹೊಡೆದಿದೆ. ಟಾಟಾ ಸುಮೋದಲ್ಲಿದ್ದವರು ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದರು.
ಗಾಯಗೊಂಡವರನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.