ಕಡಬ: ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ನಡೆದಿದೆ.ರಿಟ್ಝ್ ಕಾರು ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದು, ಪದವು – ಬಲ್ಯ ನಡುವೆ ತಿರುವಿನಲ್ಲಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಹೊಸ್ಮಠ ಹಲ್ಲಂಗೇರಿ ನಿವಾಸಿ ನಿಕೋಲಸ್ ಮಾರ್ಟಿಸ್ ಎಂಬವರ ಪುತ್ರ ನವೀನ್ ಮಾರ್ಟಿಸ್(30) ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಮೃತರ ತಂದೆ ನಿಕೋಲಸ್ ಮಾರ್ಟಿಸ್, ತಾಯಿ ಸಿಸಿಲಿಯಾ ಲಸ್ರಾದೋ, ಸಹೋದರಿ ಸುಶ್ಮಾ ಮಾರ್ಟಿಸ್ ಹಾಗೂ ಪತ್ನಿ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಗಾಯಾಳುಗಳನ್ನು ತನ್ನ ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದ ಪೋಲೀಸರ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.