ಸಾಮಾಜಿಕ ಜಾಲತಾಣದಲ್ಲಿ ಬಂಟ ಮುಖಂಡರ ಕಿಡಿ…!!!
ಮಂಗಳೂರು, ಫೆ.19: ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಪುತ್ರಿಯನ್ನು ಕ್ರಿಸ್ತಿಯನ್ ಯುವಕನೊಬ್ಬ ಮದುವೆಯಾಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಭಾನುವಾರ ಶಿರ್ವದ ಶೋಕಮಾತಾ ಇಗರ್ಜಿಯಲ್ಲಿ ಸದ್ದಿಲ್ಲದೆ ಇವರ ಮದುವೆ ನಡೆದಿದೆ ಎನ್ನಲಾಗುತ್ತಿದೆ.
ಭಾನುವಾರ ಸಂಜೆ ಇಗರ್ಜಿಯಲ್ಲಿ ಮದುವೆ, ಸೋಮವಾರ ಮಂಗಳೂರಿಗೆ ಬಂದು ಯುವಕ- ಯುವತಿ ತಮ್ಮ ಮದುವೆಯನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸೋಮವಾರ ಕಾಪು ಸಮೀಪದ ರೆಸಾರ್ಟಿನಲ್ಲಿ ಅದ್ದೂರಿ ರಿಸೆಪ್ಶನ್ ಕೂಡ ನಡೆದಿದೆ. ಮದುವೆ ಮತ್ತು ರಿಸೆಪ್ಶನ್ ಕಾರ್ಯಕ್ರಮದಲ್ಲಿ ಅಜಿತ್ ಕುಮಾರ್ ರೈ ಮತ್ತು ಅವರ ಪತ್ನಿ ಆಶಾಜ್ಯೋತಿ ರೈ ಪಾಲ್ಗೊಂಡಿದ್ದಾರೆ. ಮದುವೆಯ ರಿಸೆಪ್ಶನ್ ಫೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದು, ಬಂಟರು ಸೇರಿದಂತೆ ಹಿಂದು ಸಂಘಟನೆ ಕಾರ್ಯಕರ್ತರ ಟೀಕೆ, ಟಿಪ್ಪಣಿಗೆ ಆಹಾರವಾಗಿದೆ.
ಇಷ್ಟಕ್ಕೂ ಬಂಟರ ಹುಡುಗಿಯನ್ನು ವರಿಸಿದ ಮದುಮಗ ಯಾರು ಅಂತೀರಾ..? 2000ನೇ ಇಸವಿಯ ಆಸುಪಾಸಿನಲ್ಲಿ ಬೆಂಗಳೂರಿನಲ್ಲಿ ಆರ್ಚ್ ಬಿಷಪ್ ಆಗಿದ್ದವರು ಇಗ್ನೇಷಿಯಸ್ ಮಥಾಯಸ್. ಶಿರ್ವ ಮೂಲದ ಇಗ್ನೇಷಿಯಸ್ ಮಥಾಯಸ್ ಇಡೀ ಕರ್ನಾಟಕಕ್ಕೆ ಚರ್ಚ್ ಗಳ ಪಾಲಿಗೆ ಮುಖ್ಯಸ್ಥರಾಗಿದ್ದ ವ್ಯಕ್ತಿ. ಮಹಾ ಧರ್ಮಾಧ್ಯಕ್ಷರಾಗಿದ್ದವರು. ಆನಂತರ ರಿಟೈರ್ ಆಗಿದ್ದರು. ಇಗ್ನೇಷಿಯಸ್ ಮಥಾಯಸ್, ಮೊಮ್ಮಗನೇ ಈಗ ಮದುವೆ ಗಂಡು. ಅಂದ್ರೆ, ಇಗ್ನೇಶಿಯಸ್ ಮಥಾಯಸ್ ಅವರ ತಮ್ಮನ ಮಗ ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಗ್ರೆಗರಿ ಮಥಾಯಸ್ ಅವರ ಪುತ್ರ.

ಬಿಷಪರ ಕೃಪೆಯಲ್ಲಿ ಗ್ರೆಗರಿ ಮಥಾಯಸ್, ಮಂಗಳೂರಿನಲ್ಲಿ ಮಥಾಯಸ್ ಪ್ರಾಪರ್ಟಿ, ಮಥಾಯಸ್ ಅಲ್ಯುಮಿನಿಯಂ, ಮಥಾಯಸ್ ಸ್ಟೀಲ್, ಮಥಾಯಸ್ ಬಿಲ್ಡರ್ ಹೀಗೆ ಹತ್ತು ಹಲವು ಉದ್ಯಮಗಳನ್ನು ಬೆಳೆಸಿಕೊಂಡು ಬಂದಿದ್ದಾರೆ. ಗ್ರೆಗರಿ ಮಥಾಯಸ್ ಅವರ ಪುತ್ರನ ಪ್ರೀತಿಗೆ ಬಿದ್ದ ಅಜಿತ್ ಕುಮಾರ್ ರೈಯವರ ಕಿರಿಯ ಪುತ್ರಿ ಈಗ ಕ್ರಿಸ್ತಿಯನ್ ಶೈಲಿಯಲ್ಲೇ ಮದುವೆಯಾಗಿ ಮಥಾಯಸ್ ಸೊಸೆಯಾಗಿದ್ದಾಳೆ.
ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು, ಬಂಟರ ಯಾನೆ ನಾಡವರ ಸಂಘದಲ್ಲಿ ಪ್ರಮುಖ ಜವಾಬ್ದಾರಿ, ದೇವಸ್ಥಾನ ಸೇರಿದಂತೆ ಹಿಂದು ಸಂಘಟನೆಗಳಲ್ಲಿ ಜವಾಬ್ದಾರಿ ವಹಿಸಿಕೊಂಡು ಜನಪ್ರಿಯರಾಗಿರುವ ಅಜಿತ್ ಕುಮಾರ್ ರೈ ಮತ್ತವರ ಪತ್ನಿ ಆಶೋಜ್ಯೋತಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈಯವರ ಪುತ್ರಿ ಈಗ ಕ್ರಿಸ್ತಿಯನ್ ಕುವರನನ್ನು ವರಿಸಿದ್ದು ಬಂಟರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಹತಾಶೆಯ ಮಾತುಗಳು ಕೇಳಿಬರುತ್ತಿದೆ. ಬಂಟರ ಸಂಘಕ್ಕೆ ರಾಜಿನಾಮೆ ನೀಡಬೇಕೆಂಬ ಒತ್ತಾಯದ ಮಾತುಗಳೂ ಕೇಳಿಬರುತ್ತಿವೆ.
ಬಂಟರ ಸಂಘದ ಅಧ್ಯಕ್ಷರಾಗಿ ಬಂಟರ ಪರಂಪರೆ, ಸಂಸ್ಕೃತಿಯ ಬಗ್ಗೆ ಹೇಳಬೇಕಾದವರು ಕ್ರಿಸ್ತಿಯನ್ನರ ಜೊತೆ ಸೇರಿ ಕ್ಯಾಂಡಲ್ ಉರಿಸಿದ್ದಾರೆ ಎಂದು ಹಲವು ಮಂದಿ ಟೀಕೆ ಮಾಡಿದ್ದಾರೆ. ಮದುಮಗಳು ಕೈಯಲ್ಲಿ ಕ್ರಿಸ್ತಿಯನ್ ಶೈಲಿಯಲ್ಲಿ ಗ್ಲಾಸಲ್ಲಿ ವೈನ್ ಹಿಡಿದಿರುವ ಫೋಟೋಗಳ ಬಗ್ಗೆಯೂ ಟೀಕೆ ಕೇಳಿಬಂದಿದೆ. ಬಂಟರ ಸಂಘದ ಅಧ್ಯಕ್ಷರಾಗಿ ಹೀಗೆಲ್ಲಾ ಮಾಡಲು ಬಿಡಬಾರದಿತ್ತು ಅನ್ನೋ ಮಾತನ್ನು ಹೇಳಿ ಜಾಲತಾಣದಲ್ಲಿ ಅಜಿತ್ ಕುಮಾರ್ ರೈ ಅವರನ್ನು ಟೀಕಿಸುತ್ತಿದ್ದಾರೆ. ದೊಡ್ಡವರ ಮದುವೆ ಹೇಗೂ ನಡೆಯುತ್ತದೆ, ಬಡವರದ್ದಾದರೆ ಹಿಂದು ಸಂಘಟನೆಗಳು ಅಡ್ಡ ಬರ್ತಿತ್ತು ಎನ್ನೋ ಟೀಕೆಯನ್ನೂ ಕೆಲವರು ಮಾಡುತ್ತಿದ್ದಾರೆ.
ಕಳೆದ ಎರಡು ಅವಧಿಯಲ್ಲಿ ಬಂಟರ ಮಾತೃ ಸಂಘದ ಅಧ್ಯಕ್ಷರಾಗಿರುವ ಅಜಿತಣ್ಣನ ಬಗ್ಗೆ ಟೀಕೆ, ಟಿಪ್ಪಣಿಗಳಂತೂ ಜಾಲತಾಣದಲ್ಲಿ ಭಾರೀ ಸದ್ದು ಮಾಡಿವೆ. ತಮ್ಮ ಮಗಳನ್ನು ಕ್ರಿಸ್ತಿಯನ್ ಯುವಕನಿಗೆ ಧಾರೆಯೆರೆದು ಕೊಟ್ಟಿದ್ದು, ಪಾಶ್ಚಾತ್ಯ ಶೈಲಿಯಲ್ಲಿ ಮದುವೆಯಲ್ಲಿ ಪಾಲ್ಗೊಂಡಿದ್ದು ಟೀಕೆಗೆ ಗುರಿಯಾಗಿದೆ. ಮದುವೆ ಮಾಡೋದಿದ್ದರೆ ಹಿಂದು ಸಂಪ್ರದಾಯದಲ್ಲೇ ಮದುವೆ ಮಾಡಬಹುದಿತ್ತಲ್ಲಾ ಅನ್ನುವ ಅಸಹನೆಯ ಭಾವಗಳನ್ನೂ ಹೇಳಿಕೊಳ್ಳುತ್ತಿದ್ದಾರೆ. ಮಂಗಳೂರು, ಉಡುಪಿ, ಕರಾವಳಿಯ ಮಟ್ಟಿಗೆ ಪ್ರಬಲ ಶಕ್ತಿಯಾಗಿರುವ ಬಂಟ ಸಮುದಾಯದ ಕುವರಿಯೊಬ್ಬಳು ಕ್ರಿಸ್ತಿಯನ್ ಹುಡುಗನ ವರಿಸಿದ್ದು ಬಂಟರ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.