ಸೆರೆಮನೆಯಲ್ಲೇ ನಾಲ್ವರು ರೌಡಿಶೀಟರ್ ಗಳ ಹತ್ಯೆಗೆ ಸಂಚು
ಮಂಗಳೂರು: ಜೈಲಿನಲ್ಲಿದ್ದುಕೊಂಡೇ ತನ್ನ ಸಹಚರರ ಮೂಲಕ ಮಂಗಳೂರಿನಲ್ಲಿ ಕೊಲೆಯೊಂದನ್ನು ನಡೆಸಲು ಸಂಚು ರೂಪಿಸಿದ್ದ ಆಕಾಶಭವನ ಶರಣ್ ನನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ವಿಫಲಗೊಳಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಕಾಶಭವನ ಶರಣ್ ಮೇಲೆ ಕೊಲೆ, ಕೊಲೆಯತ್ನ ಸಹಿತ ವಿವಿಧ ಠಾಣೆಗಳಲ್ಲಿ 21 ಪ್ರಕರಣಗಳಿವೆ. ಸದ್ಯ ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣವೊಂದರ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.
ಮಾರ್ಚ್ 17ರಂದು ಜಿಲ್ಲೆಯಲ್ಲಿ ಎರಡು ದರೋಡೆ ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ 9ಮಂದಿಯನ್ನು ಬಂಧಿಸಲಾಗಿತ್ತು. ಇದಕ್ಕಿಂತ ಹಿಂದೆ ಡಿಸಿಪಿ ಹರಿರಾಂ ಶಂಕರ್ ತಲಪಾಡಿಯಲ್ಲಿ ಮರಳು ಸಾಗಾಟದ ಲಾರಿಯೊಂದನ್ನು ತಡೆದು ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಅದರಲ್ಲಿ ಓರ್ವ ಚಂದ್ರಹಾಸ ಪೂಜಾರಿ ಎಂಬ ರೌಡಿಶೀಟರ್ ಪತ್ತೆಯಾಗಿದ್ದ. ರೌಡಿಶೀಟರ್ ಚಂದ್ರಹಾಸ ಪೂಜಾರಿ ಹಾಗೂ ದರೋಡೆ ಪ್ರಕರಣದ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಇವರೆಲ್ಲರೂ ಕುಖ್ಯಾತ ರೌಡಿಶೀಟರ್ ಆಕಾಶಭವನ ಶರಣ್ ಎಂಬಾತನ ಸಹಚರರು ಎಂದು ತಿಳಿದು ಬಂದಿತ್ತು. ಇವರು ಗ್ಯಾಂಗ್ ರಚಿಸಿ ಹಫ್ತಾ ವಸೂಲಿ ಮಾಡುತ್ತಿದ್ದರು. ಇವರು ತಮಗೆ ರೌಡಿಪಟ್ಟ ದೊರಕಬೇಕೆಂದು ವಿರೋಧಿ ಪಾಳೆಯದ ಪ್ರದೀಪ್ ಮೆಂಡನ್, ಮಂಕಿಸ್ಟ್ಯಾಂಡ್ ವಿಜಯ್, ಗೌರೀಶ್, ಕೋಡಿಕೆರೆ ಮನೋಜ್ ಈ ನಾಲ್ವರಲ್ಲಿ ಓರ್ವನನ್ನು ಕೊಲೆ ಮಾಡಬೇಕೆಂದು ಸ್ಕೆಚ್ ಹಾಕಿದ್ದರು. ಈ ಕೊಲೆ ನಡೆಸಲು ಎರಡು ಬೈಕ್ಗಳು ಬೇಕೆಂದು ಬೈಕ್ ದರೋಡೆ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದೀಗ ಆಕಾಶಭವನ ಶರಣ್ ನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದು ವಾರಗಳ ಕಾಲ ತನಿಖೆ ನಡೆಸಲಾಗುತ್ತದೆ. ಅಲ್ಲದೇ, ಆಕಾಶ್ನಿಗೆ ಸಂಬಂಧಪಟ್ಟ ಡೀಲ್ ಗಳನ್ನು ಆತನ ಅನುಪಸ್ಥಿತಿಯಲ್ಲಿ ಅವನ ತಮ್ಮ ಧೀರಜ್ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
S