ವಾಷಿಂಗ್ ಟನ್: ಭಾರತ ಸರ್ಕಾರದ 3 ಕೃಷಿ ಕಾಯ್ದೆಗಳು ಜಾಗತಿಕ ಮಟ್ಟದ ಸುದ್ದಿಯಾಗಿದೆ. ಒಂದಷ್ಟು ಮಂದಿ ಖ್ಯಾತ ನಾಮರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರೆ, ಅಮೆರಿಕ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದೆ.
ಭಾರತದಲ್ಲಿ ರೈತರ ಪ್ರತಿಭಟನೆ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಗೃಹ ಇಲಾಖೆ, ಶಾಂತಿಯುತ ಪ್ರತಿಭಟನೆಗಳು ಬಲಿಷ್ಠ (ಶ್ರೀಮಂತ) ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಅಮೆರಿಕದ ಜೋ ಬೈಡನ್ ಆಡಳಿತ, ರೈತರಿಗೆ ಹೆಚ್ಚಿನ ಮಾರುಕಟ್ಟೆ ಆಯ್ಕೆಗಳನ್ನು ನೀಡುವ, ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಡುವ, ಕೃಷಿ ಕ್ಷೇತ್ರದ ಸುಧಾರಣೆಗಳಿಗೆ ಭಾರತ ಸರ್ಕಾರದ ಕ್ರಮಗಳನ್ನು ಬೆಂಬಲಿಸುತ್ತದೆ ಎಂದು ಅಮೆರಿಕ ಹೇಳಿದೆ.
ಒಟ್ಟಾರೆ, ಕೃಷಿಗೆ ಸಂಬಂಧಿಸಿದಂತೆ ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಹೆಚ್ಚಿಸುವ, ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಅಮೆರಿಕದ ವಕ್ತಾರರೊಬ್ಬರು ಹೇಳಿದ್ದಾರೆ.