ನವದೆಹಲಿ, ಜನವರಿ 30: ಗೃಹ ಸಚಿವ ಅಮಿತ್ ಶಾ ಅವರ ಪಶ್ಚಿಮ ಬಂಗಾಳ ಭೇಟಿ ಹಠಾತ್ ರದ್ದುಗೊಂಡಿದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಅನೇಕ ಕಡೆ ಪ್ರಚಾರ ಹಾಗೂ ಪಕ್ಷ ಸಂಘಟನೆಯ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಪಾಲ್ಗೊಳ್ಳಬೇಕಿತ್ತು. ಆದರೆ ಈ ಎರಡು ದಿನಗಳ ಭೇಟಿಯನ್ನು ಮುಂದೂಡಲಾಗಿದೆ.
ತಪ್ಪಿಸಿಕೊಳ್ಳಲಾಗದ ಕೆಲವು ಸನ್ನಿವೇಶಗಳಿಂದಾಗಿ ಶನಿವಾರದಂದು ನಿಗದಿಗೊಳಿಸಲಾಗಿದ್ದ ಅಮಿತ್ ಶಾ ಅವರ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಶುಕ್ರವಾರ ತಿಳಿಸಿದ್ದಾರೆ.
ಅಮಿತ್ ಶಾ ಅವರ ಪ್ರವಾಸ ರದ್ದುಗೊಳ್ಳಲು ಕಾರಣ ಏನು ಎನ್ನುವುದಕ್ಕೆ ಯಾವುದೇ ಅಧಿಕೃತ ಕಾರಣ ನೀಡಿಲ್ಲ.
ಆದರೆ ಕೇಂದ್ರ ದೆಹಲಿಯ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಎದುರು ಶುಕ್ರವಾರ ಸಂಜೆ ಸಂಭವಿಸಿದ ಲಘು ಸ್ಫೋಟದ ಹಿನ್ನೆಲೆಯಲ್ಲಿ ಅಮಿತ್ ಶಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಸಂಭವಿಸಿದ ಹಿಂಸಾಚಾರದ ಬೆನ್ನಲ್ಲೇ ಶುಕ್ರವಾರ ಸಂಜೆ 5.05ರ ಸುಮಾರಿಗೆ ಲಘು ಸಾಮರ್ಥ್ಯದ ಐಇಡಿ ಸ್ಫೋಟಗೊಂಡಿತ್ತು. ಸಮೀಪದ ಕಾರುಗಳ ಗಾಜುಗಳ ಒಡೆದಿದ್ದರ ಹೊರತಾಗಿ ಬೇರೆ ಯಾವುದೇ ಗಾಯ ಅಥವಾ ಆಸ್ತಿ ಹಾನಿ ಉಂಟಾಗಿರಲಿಲ್ಲ. ಬಿಗಿ ಭದ್ರತೆ ಇರುವ ರಾಯಭಾರ ಕಚೇರಿ ಪ್ರದೇಶದಲ್ಲಿಯೇ ಈ ಘಟನೆ ನಡೆದಿರುವುದನ್ನು ಅಮಿತ್ ಸಾ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಶನಿವಾರ ದೆಹಲಿ ಪೊಲೀಸರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.