ಬೆಂಗಳೂರು, ಜ.29- ಆಂಧ್ರ ಪ್ರದೇಶದಿಂದ ನಗರಕ್ಕೆ ಬಂದು ಬಾಗಿಲು ತೆರೆದಿರುವ ಮನೆಗಳನ್ನು ಗುರುತಿಸಿ ಲ್ಯಾಪ್‍ಟಾಪ್ ಮತ್ತು ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ 14 ಮಂದಿಯ ತಂಡದ ಪೈಕಿ ಒಬ್ಬನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಬೋಡಗುಡ್ಲುಪಲ್ಲಿ ಗ್ರಾಮದ ನಿವಾಸಿ ರವಿ ಬಂಧಿತ ಆರೋಪಿ ಎಂದು ಮಾರತ್ತಹಳ್ಳಿ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಆರೋಪಿಯಿಂದ 1.60 ಲಕ್ಷ ಹಣ, ಲ್ಯಾಪ್‍ಟಾಪ್, ಮೊಬೈಲ್ ವಶಪಡಿಸಿಕೊಂಡಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
ತಮ್ಮ ಗ್ರಾಮದಿಂದ 14 ಮಂದಿ ಬಸ್‍ನಲ್ಲಿ ಬೆಂಗಳೂರಿಗೆ ಬಂದು ಟಿನ್ ಫ್ಯಾಕ್ಟರಿ ಬಳಿ ಇಳಿದು ವೈಟ್‍ಫೀಲ್ಡ್ ವಿಭಾಗದ ಸುತ್ತಮುತ್ತ ಸಂಚರಿಸಿ ಬಾಗಿಲು ತೆರೆದ ಮನೆಗಳನ್ನು ಗುರುತಿಸುತ್ತಿದ್ದರು.
ನಂತರ ಬಾಗಿಲು ತಳ್ಳಿ ಒಳಗೆ ಯಾರೂ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಕೈಗೆ ಸಿಕ್ಕಿದ ಲ್ಯಾಪ್‍ಟಾಪ್, ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಸಂಜೆ ಪುನಃ ಬಸ್‍ನಲ್ಲಿ ಊರಿಗೆ ವಾಪಸಾಗುತ್ತಿದ್ದರು.
ಒಂದು ವೇಳೆ ಬಾಗಿಲು ತಳ್ಳಿದಾಗ ಒಳಗಡೆ ಯಾರಾದರೂ ಇರುವುದು ಕಂಡುಬಂದರೆ ನಾವು ಆಶ್ರಮದವರು, ಎನ್‍ಜಿಒಗಳು ಸಹಾಯ ಮಾಡಿ ಎಂದು ಹೇಳುತ್ತಿದ್ದರು. ಕಳ್ಳತನ ಮಾಡಿದ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಹೋಗಿ ಕಳ್ಳತನ ಮಾಡಿಕೊಂಡು ಊರಿಗೆ ವಾಪಸಾಗದಿದ್ದರೆ ಪೆÇಲೀಸರಿಗೆ ಸಿಕ್ಕಿಬಿದ್ದಿರಬಹುದೆಂದು ಅವರ ಕುಟುಂಬದವರು ಮನೆ ಖಾಲಿ ಮಾಡಿಕೊಂಡು ಬೇರೆ ಊರಿಗೆ ಹೋಗುತ್ತಿದ್ದರು.
ಇತ್ತೀಚೆಗೆ ವೈಟ್‍ಫೀಲ್ಡ್ ವಿಭಾಗದಲ್ಲಿ ಲ್ಯಾಪ್‍ಟಾಪ್ ಇನ್ನಿತರ ವಸ್ತುಗಳು ಕಳ್ಳತನವಾಗುತ್ತಿದ್ದ ಬಗ್ಗೆ ದೂರುಗಳು ಹೆಚ್ಚಾಗಿ ದಾಖಲಾಗುತ್ತಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿದ ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಅವರು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು.
ಠಾಣೆ ಸಬ್‍ಇನ್ಸ್‍ಪೆಕ್ಟರ್ ಅಶೋಕ್ ಅವರ ತಂಡ ಕಾರ್ಯಾಚರಣೆ ನಡೆಸಿ ಗ್ಯಾಂಗ್‍ನ ಒಬ್ಬನನ್ನು ಬಂಧಿಸಿ ಹಣ, ಲ್ಯಾಪ್‍ಟಾಪ್, ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.