Wednesday, May 31, 2023
HomeUncategorizedಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯ ಈ ಸೌಲಭ್ಯ ದೇಶಕ್ಕೆ ಮಾದರಿ…!!!

ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯ ಈ ಸೌಲಭ್ಯ ದೇಶಕ್ಕೆ ಮಾದರಿ…!!!

- Advertisement -


Renault

Renault
Renault

- Advertisement -

ಬೆಂಗಳೂರು: ಕೋವಿಡ್‌ನಂಥ ಸಂಕಷ್ಟ ಪರಿಸ್ಥಿತಿಯೂ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಬಳಕೆ ಮಾಡಬಲ್ಲ ಅತ್ಯಾಧುನಿಕ ಮಾಡ್ಯೂಲರ್‌ ಐಸಿಯು ಘಟಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಲೋಕಾರ್ಪಣೆ ಮಾಡಿದರು.

ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಕೇವಲ ಮೂರು ತಿಂಗಳ ಕಾಲದಲ್ಲಿ ಸ್ಥಾಪಿಸಲಾಗಿರುವ 100 ಹಾಸಿಗೆಗಳ ಐಸಿಯು ಇಂದಿನಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದು, ದಾನಿಗಳ ನೆರವಿನಿಂದ ಈ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡ್ಯೂಲರ್‌ ಐಸಿಯು ಸ್ಥಾಪಿಸಿರುವುದು ಶ್ಲಾಘನೀಯ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಯದೇವ ಹೃದ್ರೋಗ ಆಸ್ಪತ್ರೆ ವತಿಯಿಂದ 50 ಹಾಸಿಗೆಯ ಕ್ಯಾಥ್ ಲ್ಯಾಬ್‌ ಸ್ಥಾಪನೆ ಹಾಗೂ 50 ಹಾಸಿಗೆಯ ಟ್ರಾಮಾ ಕೇರ್ ಸೆಂಟರ್ ಹಾಗೂ 150 ಹಾಸಿಗೆಯ ತಾಯಿ-ಮಗು ಚಿಕಿತ್ಸಾ ಕೇಂದ್ರವನ್ನು ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ಮುಂದಿನ ದಿನಗಳಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ಇದೇ ಸಂದರ್ಭದಲ್ಲಿ ಭರವಸೆ ಕೊಟ್ಟರು.

ಐಸಿಯು ವಿಶೇಷತೆ

ಸರಕು ಸಾಗಣೆ ಮಾಡುವ ಕಂಟೇನರ್‌ಗಳ ಮಾದರಿ ಇಟ್ಟುಕೊಂಡು ಈ ಐಸಿಯುಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 100 ಹಾಸಿಗೆಗಳು ಲಭ್ಯ ಇರುತ್ತವೆ. ಪ್ರತೀ ಒಂದು ಕಂಟೇನರ್‌ನಲ್ಲಿ (ಐಸಿಯುನಲ್ಲಿ) ಐದು ಐಸಿಯು ಹಾಸಿಗೆಗಳು ಇವೆ. ಎಲ್ಲ ಮಾಡ್ಯೂಲರ್‌ ಐಸಿಯುಗಳ ನಿರ್ವಹಣೆಗೆ ತಜ್ಞ ವೈದ್ಯರು, ಅರೆವೈದ್ಯ ಸಿಬ್ಬಂದಿ, ನರ್ಸುಗಳು ಸೇರಿ ಒಟ್ಟು 150 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಕೋವಿಡ್‌ ಮಾತ್ರವಲ್ಲದೆ ಯಾವುದೇ ರೀತಿಯ ಹೆಲ್ತ್‌ ಎಮರ್ಜೆನ್ಸಿಯಂಥ ಸಂದರ್ಭಗಳಲ್ಲಿ ಇಂಥ ಮಾಡ್ಯೂಲರ್‌ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಇವುಗಳನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಿ ಇಡಬಹುದು. ಪ್ರತಿ ಐಸಿಯು ಒಂದರ ಗಾತ್ರ 12.135 X 3.3 X 2.62 ಮೀಟರ್ ಇದ್ದು, ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯ, ಕುಶಲತೆಯನ್ನು ಇವು ಹೊಂದಿವೆ.

ಆಧುನಿಕ ತಂತ್ರಜ್ಞಾನ

ಹೈ ಸ್ಪೀಡ್‌ ವೈಫೈ, ಪ್ರತ್ಯೇಕ ಲ್ಯಾನ್‌ ಕೇಬಲ್‌, ಎಚ್‌ಡಿ ಕ್ಯಾಮೆರಾಗಳು, ಸೆಂಟ್ರಲ್‌ ಮಾನಿಟರಿಂಗ್‌ ಸಿಸ್ಟಂ, ಪ್ರತ್ಯೇಕ ನೀರು ಮತ್ತು ಒಳಚರಂಡಿ ವ್ಯವಸ್ಥೆ ಪ್ರತಿ ಮಾಡ್ಯೂಲರ್‌ ಐಸಿಯುಗೂ ಇರುತ್ತದೆ. ಜತೆಗೆ, ಸೆಂಟ್ರಲ್‌ ಮಾನಿಟರಿಂಗ್‌ ಸಿಸ್ಟಮ್‌ ಮೂಲಕ ವೈದ್ಯರು ಎಲ್ಲೇ ಇದ್ದರೂ ಸುಲಭವಾಗಿ ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಬಹುದು.

ಲಿಕ್ವಿಡ್‌ ಆಕ್ಸಿಜನ್‌ (ದ್ರವರೂಪದ ಆಮ್ಲಜನಕ) ವ್ಯವಸ್ಥೆ ಇರುತ್ತದೆ. ಇದರ ಪ್ರಮಾಣವನ್ನು 2,000 ಲೀಟರುಗಳಿಂದ 8,000 ಲೀಟರಿಗೆ ಹೆಚ್ಚಿಸಲಾಗಿದೆ. ಹವಾನಿಯಂತ್ರಿತ ವ್ಯವಸ್ಥೆ ಜತೆಗೆ, ಶುದ್ಧ ಗಾಳಿ ತುಂಬಿಸಿ ಕಂಪ್ಲೀಟ್ ಏರ್ʼಟೈಟ್ ಮಾಡಲಾಗಿರುತ್ತದೆ. ನಮ್ಮ ದೇಶದಲ್ಲೇ ಇದೇ ಮೊದಲ ಪ್ರಯೋಗ. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು.

ರಾಷ್ಟ್ರಪತಿಗಳಿಂದ ಹೊಗಳಿಕೆ

ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 2,100ಕ್ಕೂ ಅಧಿಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ಲಸಿಕೆ ಅಭಿಯಾನದಲ್ಲಿಯೂ ಈ ಆಸ್ಪತ್ರೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈಚೆಗೆ ರಾಜ್ಯ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿಗಳು ಕೂಡ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದರು. ಈ ನಿಟ್ಟಿನಲ್ಲಿ ಇಲಾಖೆಗೆ ಹೆಚ್ಚೆಚ್ಚು ಅನುದಾನ ಬಿಡುಗಡೆ ಮಾಡಲು ಸರಕಾರ ಬದ್ಧವಿದೆ ಎಂದರು ಸಿಎಂ ಯಡಿಯೂರಪ್ಪ ಅವರು ಹೇಳಿದರು.

ದಾನಿಗಳ ನೆರವು

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾಡ್ಯೂಲರ್‌ ಐಸಿಯುಗಳ ಅತ್ಯಂತ ಸಹಕಾರಿ. 100 ಹಾಸಿಗೆಗಳು ಇಲ್ಲಿ ಲಭ್ಯವಿದ್ದು, ದಾನಿಗಳ ನೆರವಿನಿಂದ ನಿರ್ಮಾಣ ಮಾಡಲಾಗಿದೆ. ಎಂಥಹುದೇ ಪರಿಸ್ಥಿತಿಯಲ್ಲೂ ಇವುಗಳನ್ನು ಬಳಸಬಹುದಾಗಿದ್ದು, ರಾಜ್ಯದ ಆವಿಷ್ಕಾರ ಕುಶಲತೆಗೆ ಕನ್ನಡಿಯಾಗಿದೆ ಎಂದರು.

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿನ ಟ್ರಾಮಾ ಕೇರ್ ಸೆಂಟರನ್ನೇ ಅಕಾಡೆಮಿಕ್ ಕ್ರಿಟಿಕಲ್ ಕೇರ್ ಸೆಂಟರ್ ಆಗಿ ಮಾಡುವುದರಿಂದ ತಜ್ಞ ಸಿಬ್ಬಂದಿಯ ಕೊರತೆ ನೀಗಿಸಬಹುದು ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.

ಶಾಸಕ ದಿನೇಶ್‌ ಗುಂಡೂರಾವ್ ಅವರು ಮಾತನಾಡಿ, ಕೇವಲ ಮೂರೇ ತಿಂಗಳಲ್ಲಿ ಇಂಥಹ ಸುಸಜ್ಜಿತ ಹಾಗೂ ಅತ್ಯಾಧುನಿಕ ಮಾಡ್ಯೂಲರ್‌ ಐಸಿಯು ಸ್ಥಾಪನೆಯಾಗಿದೆ ಎಂದರೆ ಅಚ್ಚರಿಯ ಸಂಗತಿಯೇ ಸರಿ. ಈ ಸಾಧನೆ ಹಿಂದೆ ಸಚಿವ ಡಾ. ಅಶ್ವಥ್ ನಾರಾಯಣ ಅವರ ಶ್ರಮವಿದೆ ಎಂದು ಶ್ಲಾಘಿಸಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments