ಮಂಗಳೂರು : ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ಕೊರೋನ ಮತ್ತು ಲಾಕ್‌ಡೌನ್ ಸಂದರ್ಭ ಸೇವೆಗೈದ 11 ಮಂದಿ ಕೋವಿಡ್ ಸೇನಾನಿಗಳಿಗೆ ಸನ್ಮಾನಿಸುವ ಕಾರ್ಯಕ್ರಮವು ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿಟ್ಟೆ ವಿವಿ ಕುಲಪತಿ ಡಾ.ಎನ್. ವಿನಯ್ ಹೆಗ್ಡೆ ಕೋವಿಡ್-19 ಮತ್ತು ಲಾಕ್‌ಡೌನ್ ಸಂದರ್ಭ ಜಗತ್ತಿನ ನಾನಾ ಕಡೆ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಈ ಸಂದರ್ಭ ನೆರವು ನೀಡುವುದು ಪುಣ್ಯದಾಯಕ. ಹೀಗೆ ನೆರವು ನೀಡಿದವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವು ಅತ್ಯಂತ ಶ್ಲಾಘನೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸದಾನಂದ ಶೆಟ್ಟಿ ಮಾತನಾಡಿ, ಕೊರೋನ ಸಂದರ್ಭ ಜನರು ಪರಸ್ಪರ ಮಾತನಾಡಲು, ಬೆರೆಯಲು ಭಯಪಡುತ್ತಿದ್ದರು.
ಆದರೆ ಕೋವಿಡ್ ಸೇನಾನಿಗಳು ಅದ್ಯಾವುದನ್ನೂ ಲೆಕ್ಕಿಸದೆ ನಾನಾ ರೀತಿಯ ಸೇವೆಗೈದಿರುವುದನ್ನು ಮರೆಯಲು ಸಾಧ್ಯ. ಬಿಸಿಸಿಐ ಇಂತಹ ಸೇನಾನಿಗಳನ್ನು ಸನ್ಮಾನಿಸುವ ಮೂಲಕ ಅವರಿಗೆ ಮತ್ತಷ್ಟು ಹುರುಪು ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಐದು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಸಂಸ್ಥೆಯು ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೀಗ 11 ಮಂದಿ ಕೋವಿಡ್ ಸೇನಾನಿಗಳನ್ನು ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಗುರುತಿಸಿದೆ ಎಂದರು.
ಸನ್ಮಾನ: ಕೊರೋನ ಸಂದರ್ಭದ ಸೇನಾನಿಗಳಾದ ಅಬ್ದುಲ್ ರಹ್ಮಾನ್ ಗೂಡಿನಬಳಿ, ಝಿಯಾವುದ್ದೀನ್ ಅಹ್ಮದ್, ಅಬ್ದುಲ್ ರವೂಫ್ ಪುತ್ತಿಗೆ, ಡಾ. ಫರ್ಹಾನ್ ಫಝಲ್, ಡಾ.ತಾಜುದ್ದೀನ್ ಕೆ., ಕೆಎಂ ಆಸೀಫ್, ಅಬೂಬಕರ್ ಸಿದ್ದೀಕ್, ಮುಹಮ್ಮದ್ ಇಲ್ಯಾಸ್ ಬಜ್ಪೆ, ಅಶ್ರಫ್ ಕಿನಾರ ಕುದ್ರೋಳಿ, ಮುಹಮ್ಮದ್ ಅಶ್ರಫ್ ಕಂದಕ್, ಅಬ್ದುಲ್ ಅಝೀಝ್ ಅವರನ್ನು ಸನ್ಮಾನಿಸಲಾಯಿತು.
ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಕೆ.ಎ., ಮುಮ್ತಾಝ್ ಅಲಿ ಕೃಷ್ಣಾಪುರ, ಬಿ.ಎ. ನಝೀರ್, ಶೌಕತ್ ಶೌರಿ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿದರು. ಬಿಸಿಸಿಐ ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್ ಅತಿಥಿಗಳನ್ನು ಪರಿಚಯಿಸಿದರು. ಬಿಸಿಸಿಐ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್ ವಂದಿಸಿದರು.