ಮುಂಬಯಿ: ಟೀಮ್ ಇಂಡಿಯಾ ಆಯ್ಕೆಯ ಮಾನದಂಡವನ್ನ ಬಿಸಿಸಿಐ, ಇತ್ತಿಚಿಗಷ್ಟೇ ಬದಲಿಸಿತ್ತು. ಹೌದು..! ಯೋ ಯೋ ಟೆಸ್ಟ್ ಬದಲಿಗೆ ಟೈಮ್ ಟ್ರಯಲ್ ಫಿಟ್ನೆಸ್ ಟೆಸ್ಟ್, ಪರಿಚಯಿಸಿತ್ತು. ಆದ್ರೀಗ ಟೈಮ್ ಟ್ರಯಲ್ನ ಮೊದಲ ಟೆಸ್ಟ್, ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿ ಕನಸು ಕಾಣ್ತಿದ್ದವರಿಗೆ ಶಾಕ್ ನೀಡಿದೆ.
ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯತ್ತ ಗಮನ ಹರಿಸಿದ್ರೆ, ಅತ್ತ ಬಿಸಿಸಿಐ, ಟೆಸ್ಟ್ ಸರಣಿ ಬಳಿಕ ನಡೆಯಲಿರುವ 5 ಪಂದ್ಯಗಳ ಟಿ 20, ಮೂರು ಪಂದ್ಯಗಳ ಏಕದಿನ ಸರಣಿಯತ್ತ ಕಾನ್ಸಂಟ್ರೇಟ್ ಮಾಡ್ತಿದೆ. ಹೀಗಾಗಿ ಮುಂಬರುವ ಚುಟುಕು ಸಮರದ ಕಲಿಗಳ ಆಯ್ಕೆಗೆ ಎನ್ಸಿಎ, ಯುವ ಆಟಗಾರರನ್ನ ಮೊದಲ ಹಂತದ ಟೈಮ್ ಟ್ರಯಲ್ಸ್ ಫಿಟ್ನೆಸ್ ಟೆಸ್ಟ್ಗೆ ಒಳಪಡಿಸಿತ್ತು. ಆದರೆ ಮೊದಲ ಅಗ್ನಿಪರೀಕ್ಷೆಯಲ್ಲೇ, ಯುವ ಆಟಗಾರರು ಫೇಲ್ ಆಗಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಟಗಾರರ ಗಾಯದ ಸಮಸ್ಯೆ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಬಿಸಿಸಿಐ, ಟೀಮ್ ಇಂಡಿಯಾ ಆಯ್ಕೆ ಮಾನದಂಡವಾಗಿದ್ದ ಯೋ-ಯೋ ಟೆಸ್ಟ್ ಬದಲಿಗೆ ಟೈಮ್ ಟ್ರಯಲ್ಸ್ ಫಿಟ್ನೆಸ್ ಪರೀಕ್ಷೆ ಜಾರಿ ಮಾಡಿದೆ. ಈ ಫಿಟ್ನೆಸ್ ಟೆಸ್ಟ್ನಲ್ಲಿ 2 ಕಿ.ಮೀ ದೂರವನ್ನ ನಿಗಧಿತ ಸಮಯಕ್ಕೆ ಕ್ರಮಿಸಬೇಕು. ವೇಗಿಗಳು 8 ನಿಮಿಷ 15 ಸೆಕೆಂಡ್ಗಳಲ್ಲಿ ಹಾಗೂ ಬ್ಯಾಟ್ಸ್ಮನ್ಗಳು 8 ನಿಮಿಷ 30 ಸೆಕೆಂಡ್ಗಳಲ್ಲಿ ಕ್ರಮಿಸಬೇಕಿದೆ. ಇದರಂತೆ ಈಗ ಇಂಗ್ಲೆಂಡ್ ವಿರುದ್ಧದ ಚುಟಕು ಕದನಕ್ಕೂ ಮುನ್ನ ಟೈಮ್ ಟ್ರಯಲ್ಸ್ ಪರೀಕ್ಷೆಗೆ ಒಳಪಡಿಸಿದೆ.
ಟೈಮ್ ಟ್ರಯಲ್ಸ್ನಲ್ಲಿ ಯುವ ಆಟಗಾರರು ಫೇಲ್
ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ-20 ಸರಣಿ ತಂಡದ ಆಯ್ಕೆಗೆ, ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್, ಹೆಡ್ ಫಿಸಿಯೋ ಮುಂದಾಳತ್ವದಲ್ಲಿ 2 ಕಿ.ಮೀ ಟೈಮ್ ಟ್ರಯಲ್ ಫಿಟ್ನೆಸ್ ಟೆಸ್ಟ್ ನಡೆಸಲಾಗಿತ್ತು. ಟೀಮ್ ಇಂಡಿಯಾದ ಯುವ ಆಟಗಾರ ಸಂಜು ಸ್ಯಾಮ್ಸನ್ ಸೇರಿದಂತೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶನ್ ಕಿಶಾನ್, ಆಲ್ರೌಂಡರ್ ರಾಹುಲ್ ತಿವಾಟಿಯಾ, ನಿತೀಶ್ ರಾಣಾ, ಯುವ ವೇಗಿ ಸಿದ್ಧಾರ್ಥ್ ಕೌಲ್, ಜೈದೇವ್ ಉನಾದ್ಕಟ್ರನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಈ ಯುವ ಆಟಗಾರರು, ಟೈಮ್ ಟ್ರಯಲ್ಸ್ ಫಿಟ್ನೆಸ್ ಟೆಸ್ಟ್ನಲ್ಲಿ ಫೇಲ್ ಆಗಿದ್ದಾರೆ. ಇದರಿಂದ ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿಯ ಕನಸಿನಲ್ಲಿದ್ದ ಆಟಗಾರರ ಆಯ್ಕೆ, ಅನುಮಾನವಾಗಿದೆ.