ಮಂಗಳೂರು, ಫೆ.15: ಟಿವಿ, ಫ್ರಿಡ್ಜ್, ಬೈಕ್ ಇದ್ದರೆ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನ ಮಾಜಿ ಆಹಾರ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದು, ಟಿವಿ, ಫ್ರಿಡ್ಸ್ ಮಾತ್ರ ಯಾಕೆ, ಮೊಬೈಲ್ ಇದ್ದವರ ಕಾರ್ಡುಗಳನ್ನೂ ರದ್ದು ಪಡಿಸಲಿ. ಆಗ ಎಲ್ಲಾ ಬಿಪಿಎಲ್ ಕಾರ್ಡುಗಳು ರದ್ದಾಗುತ್ತವೆ. ಹೇಗೆ ಮೊಬೈಲ್ ಇಲ್ಲದ ಮನೆಗಳು ಇಲ್ಲವೋ, ಟಿವಿ ಇಲ್ಲದ ಮನೆಗಳೂ ಸಿಗಲಾರವು ಎಂದು ಟೀಕೆ ಮಾಡಿದ್ದಾರೆ.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ಈ ಹಿಂದೆಯೂ ಬಿಜೆಪಿ ಸರಕಾರ ಇದ್ದಾಗ ರೂ.500 ಕರೆಂಟ್ ಬಿಲ್ ಬಂದರೆ ಬಿಪಿಎಲ್ ರದ್ದುಪಡಿಸುವ ನೀತಿ ತಂದಿದ್ದರು. ಆದರೆ, ಕಾಂಗ್ರೆಸ್ ಎಲ್ಲವನ್ನೂ ಸರಳಗೊಳಿಸಿ, ತಳಮಟ್ಟದ ಬಡವನಿಗೆ ಸುಲಭದಲ್ಲಿ ರೇಷನ್ ಕಾರ್ಡ್ ಸಿಗುವಂತೆ ಮಾಡಿತ್ತು. ಕೇವಲ ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ರೇಷನ್ ಕಾರ್ಡನ್ನು ನೋಂದಣಿಗೊಳಿಸಿದ ಒಂದೇ ವಾರಕ್ಕೆ ರೇಷನ್ ಕೊಡುವ ವ್ಯವಸ್ಥೆ ಮಾಡಿದ್ದೆವು. ಪೋಸ್ಟಲ್ಲಿ ರೇಷನ್ ಕಾರ್ಡ್ ಕಳಿಸುವ ವ್ಯವಸ್ಥೆಯಲ್ಲಿ 25 ಲಕ್ಷ ಮಂದಿಗೆ ರೇಷನ್ ನೀಡಲಾಗಿತ್ತು. ಇದರಿಂದ ಅಲೆಮಾರಿಗಳಿಗೆ, ಕಸ ಹೆಕ್ಕುವ ಮಂದಿಗೂ ರೇಷನ್ ಸಿಕ್ಕಿತ್ತು. ಅದಲ್ಲದೆ, ಬಾಗಲಕೋಟೆಯ ವ್ಯಕ್ತಿ ಮಂಗಳೂರೋ, ಬೆಂಗಳೂರಿನಲ್ಲೋ ಇದ್ದರೆ, ಅಲ್ಲೇ ರೇಷನ್ ಪಡೆಯುವ ರೀತಿ ಪೋರ್ಟಬಿಲಿಟಿ ಸೌಲಭ್ಯವನ್ನೂ ಮಾಡಿದ್ದೆವು ಎಂದರು.
ಆದರೆ, ಈಗ ಬಿಜೆಪಿ ಸರಕಾರ ಮತ್ತೆ ಬಡ ಜನರ ಮೇಲೆ ಪ್ರಹಾರ ಮಾಡುತ್ತಿದೆ. ಟಿವಿ, ಫ್ರಿಡ್ಜ್ ಇದ್ದರೆ, ಬಿಪಿಎಲ್ ಕಾರ್ಡ್ ರದ್ದುಪಡಿಸುವ ಮಾತನ್ನಾಡುತ್ತಿದ್ದಾರೆ. ಸರಿಯಾಗಿ ರೇಷನ್ ವ್ಯವಸ್ಥೆ ಮಾಡಲು ಸಾಧ್ಯವಾಗದ ಮಂದಿ ಈಗ ಬಿಪಿಎಲ್ ರದ್ದು ಪಡಿಸಲು ಹೋಗಿದ್ದಾರೆ. ಕೇಂದ್ರ ಸರಕಾರದಿಂದಲೇ ರಾಜ್ಯದ 65 ಶೇ. ಜನರಿಗೆ ಅಕ್ಕಿ ಬರುತ್ತಿದೆ. ಇವರಿಗೆ ಅಕ್ಕಿ ಕೊಡುವುದಕ್ಕೇನು ಅಡ್ಡಿ. ಕಾಂಗ್ರೆಸ್ ಸರಕಾರದಲ್ಲಿ ತಂದಿದ್ದ ಪಿಡಿಎ ವ್ಯವಸ್ಥೆಯನ್ನೇ ರದ್ದುಪಡಿಸಲು ಬಿಜೆಪಿ ಹೊರಟಿದೆ. ಕಾಂಗ್ರೆಸ್ ಬಡತನ ನಿವಾರಣೆಗೆ ಗರೀಬಿ ಹಠಾವೋ ತಂದಿದ್ದರೆ, ಬಿಜೆಪಿಯವರು ಗರೀಬೋಂಕೋ ಹಠಾವೋ ಹೆಸರಲ್ಲಿ ಬಡವರನ್ನೇ ಒದ್ದೋಡಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಸರಕಾರದ ನಿರ್ಧಾರದ ಬಗ್ಗೆ ಆಹಾರ ಸಚಿವರ ಜೊತೆ ಮಾತನಾಡುತ್ತೇನೆ. ಈ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ರಾಜ್ಯ ಸರಕಾರ ಉಳಿಯಲ್ಲ. ಜನರನ್ನು ಹಿಂಸೆಗೆ ಒಳಪಡಿಸಿದರೆ, ಸರಕಾರವನ್ನೇ ಜನರು ಬೀಳಿಸುತ್ತಾರೆ ಎಂದು ಖಾದರ್ ಟೀಕಿಸಿದರು.
ಸುರತ್ಕಲ್ ಟೋಲಿಗೆ ಸಂಸದರ ನಿರ್ಲಕ್ಷ್ಯ ಕಾರಣ !
ಸುರತ್ಕಲ್ ಟೋಲ್ ಗೇಟ್ ರದ್ದತಿ ಬಗ್ಗೆ ಕೇಳಿದ ಪ್ರಶ್ನೆಗೆ, ಇದು ಎರಡು ಕಂಪನಿಗಳ ನಡುವಿನ ವ್ಯಾಜ್ಯ. ಇರ್ಕಾನ್ ಮತ್ತು ನವಯುಗ ಕಂಪನಿಯ ಅಧಿಕಾರಿಗಳನ್ನು ಕರೆಸಿ ಮಾತನಾಡಬೇಕಿದ್ದವರು ಸಂಸದರು. ಕೇಂದ್ರದ ಸಚಿವರೊಂದಿಗೆ ಈ ಬಗ್ಗೆ ಮಾತನಾಡಿ, ಟೋಲ್ ರದ್ದು ಮಾಡಬೇಕು. ಇರ್ಕಾನ್ ಸಂಸ್ಥೆಗೆ ಹಣ ಆಗಬೇಕಿದ್ದರೆ, ಹೆಜಮಾಡಿ ಟೋಲಿನಲ್ಲಿ ಸ್ವಲ್ಪಾಂಶ ಪಡೆಯುವ ವ್ಯವಸ್ಥೆಯನ್ನು ಕೇಂದ್ರದ ಉಸ್ತುವಾರಿ ಹೊತ್ತ ಸಂಸದರು ಮಾಡಬೇಕು. ನಾನು ನಿಯೋಗ ತೆರಳಲು ರೆಡಿಯಿದ್ದೇನೆ. ಸಂಸದರ ಜೊತೆ ಹೇಳಿದ್ದೆ, ನಮ್ಮನ್ನು ಕರೆಯುವುದಿಲ್ಲ. ಕ್ರೆಡಿಟ್ ನಮಗೆ ದೊರತರೆ ಎಂಬ ಭಯ ಅವರಿಗಿದೆ ಎಂದರು ಖಾದರ್. ಸುದ್ದಿಗೋಷ್ಠಿಯಲ್ಲಿ ಟಿ.ಕೆ.ಸುಧೀರ್, ಸೂರಜ್ ಪಾಲ್ ಮತ್ತಿತರರು ಇದ್ದರು.