ಬೆಂಗಳೂರು (ಜ.27): ವಿಧಾನಪರಿಷತ್ತಿನ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ತಾತ್ವಿಕವಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಸ್ಪಷ್ಟಚಿತ್ರಣ ಹೊರಬೀಳಲಿದೆ.
ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಈ ಸಂಬಂಧ ಬಿಜೆಪಿ ನಾಯಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಬುಧವಾರ ಪರಿಷತ್ತಿನ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.
ಪದೇ ಪದೇ ಖಾತೆ ಬದಲಾವಣೆ; ಇಬ್ಬರು ಪ್ರಮುಖ ಸಚಿವರ ರಾಜೀನಾಮೆ?
ಇದೇ ವೇಳೆ ಗುರುವಾರದಿಂದ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಶುಕ್ರವಾರ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತದೆ. ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಸಭಾಪತಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹೀಗಾಗಿ, ಬುಧವಾರ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಹೊಂದಾಣಿಕೆ ರೂಪುರೇಷೆ ಅಂತಿಮಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಧಾನಪರಿಷತ್‌ನ ಸಭಾಪತಿ ಸ್ಥಾನಕ್ಕೆ ಪ್ರತಾಪ್‌ಚಂದ್ರಶೆಟ್ಟಿರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿಅವರಿಗೆ ಆ ಹುದ್ದೆ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.
ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಮುಂದಾಗಿರುವ ಬಿಜೆಪಿಯು ಉಪಸಭಾಪತಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಸಂಜೆ ತಮ್ಮ ನಿವಾಸದಲ್ಲಿ ಪರಿಷತ್ತಿನ ಬಿಜೆಪಿ ಸದಸ್ಯರ ಸಭೆ ಕರೆದಿದ್ದಾರೆ.
ಆಯನೂರು ಮಂಜುನಾಥ್, ಶಶಿಲ್ ನಮೋಶಿ, ಅರುಣ್ ಶಹಾಪುರ, ಮಹಾಂತೇಶ್ ಕವಟಗಿಮಠ ಮೊದಲಾದವರು ಉಪಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮುಖ್ಯಮಂತ್ರಿ ಸಭೆಯ ಬಳಿಕ ಯಾರು ಅಭ್ಯರ್ಥಿಯಾಗಬೇಕು ಎಂಬುದು ಅಂತಿಮಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಗೌಡರ ನಿವಾಸದಲ್ಲಿ ಸಭೆ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಂಗಳವಾರ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಪಕ್ಷದ ವಿಧಾನಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿದರು.
ಮೂರು ಗಂಟೆಗಿಂತ ಹೆಚ್ಚು ಕಾಲ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೇಲ್ಮನೆ ಸದಸ್ಯರಾದ ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಬೋಜೇಗೌಡ, ರಮೇಶ್‌ಗೌಡ, ತಿಪ್ಪೇಸ್ವಾಮಿ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು. ವಿಧಾನಪರಿಷತ್‌ನಲ್ಲಿ ಅಧಿಕ ಸಂಖ್ಯಾಬಲ ಹೊಂದಿದ್ದರೂ ಸಭಾಪತಿ ಸ್ಥಾನಕ್ಕೆ ಅಗತ್ಯ ಇರುವ ಸಂಖ್ಯಾಬಲ ಇಲ್ಲದ ಕಾರಣ ಆಡಳಿತಾರೂಢ ಬಿಜೆಪಿಗೆ ಜೆಡಿಎಸ್ ಬೆಂಬಲ ಅನಿವಾರ್ಯ. ಹೀಗಾಗಿ ಮುಂದಿನ ಒಂದೂವರೆ ವರ್ಷಕಾಲ ಜೆಡಿಎಸ್ ಸಭಾಪತಿ ಸ್ಥಾನವನ್ನು ಪಡೆದುಕೊಳ್ಳುವ ಸಂಬಂಧ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಯಿತು. ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿರುವ ಹಿರಿಯ ನಾಯಕ ಬಸವರಾಜ ಹೊರಟ್ಟಿಅವರಿಗೆ ಹುದ್ದೆ ನೀಡುವ ಸಂಬಂಧ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಸಹಮತ ವ್ಯಕ್ತಪಡಿಸಿದರು ಎನ್ನಲಾಗಿದೆ.