Sunday, September 24, 2023
Homeಕರಾವಳಿಬಿಲ್ಲವರ ಟೀಕೆ ಮಧ್ಯೆ ಪ್ರಶಸ್ತಿ ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಲ್ಲವರ ಟೀಕೆ ಮಧ್ಯೆ ಪ್ರಶಸ್ತಿ ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

- Advertisement -Renault

Renault
Renault

- Advertisement -

ಉಳ್ಳಾಲ, ಫೆ.28: ರಾಜಕೀಯದಲ್ಲಿ ಸರಳತೆ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಸರಾಗಿರುವ ಜಿಲ್ಲೆಯ ಏಕೈಕ ವ್ಯಕ್ತಿ ಜನಾರ್ಧನ ಪೂಜಾರಿ. ನಾನಿನ್ನೂ ಅವರಷ್ಟು ಎತ್ತರಕ್ಕೆ ಹೋಗಲು ಬಹಳಷ್ಟು ಕಾಲಾವಕಾಶ ಬೇಕಿದೆ. ಹಾಗಾಗಿ ಬ್ರಹ್ಮಶ್ರೀ ಪ್ರಶಸ್ತಿಯನ್ನು ಪಡೆಯಲು ಅರ್ಹ ವ್ಯಕ್ತಿ ನಾನಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಈ ಮೂಲಕ ಉಳ್ಳಾಲದ ಬಿಲ್ಲವ ವೇದಿಕೆಯಿಂದ ತನಗೆ ಘೋಷಿಸಿದ್ದ “ಬ್ರಹ್ಮಶ್ರೀ” ಪ್ರಶಸ್ತಿ ಬಗ್ಗೆ ಬಿಲ್ಲವರಿಂದ ವಿರೋಧ ವ್ಯಕ್ತವಾಗಿರುವ ಮಧ್ಯೆಯೇ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿ ಅಚ್ಚರಿ ಮೂಡಿಸಿದ್ದಾರೆ.

ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ನೆರಳಲ್ಲಿ ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ  ನಡೆದ “ಮೆರುಗು 2021” (ಪ್ರತಿಭಾ ಅನಾವರಣದ ಹೊಸ್ತಿಲು) ನೃತ್ಯ ಸ್ಫರ್ಧೆ, ಆಯುಷ್ಮಾನ್ ಕಾರ್ಡ್ ಮತ್ತು ಶೈಕ್ಷಣಿಕ ಶಾಲಾ ಶುಲ್ಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ವೇದಿಕೆ ವತಿಯಿಂದ “ಬ್ರಹ್ಮಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಘೋಷಿಸಲಾಗಿತ್ತು. ಆದರೆ, ನಳಿನ್ ಕುಮಾರ್ ಅವರಿಗೆ  ಬ್ರಹ್ಮಶ್ರೀ ಪ್ರಶಸ್ತಿ ನೀಡುವುದನ್ನ ವಿರೋಧಿಸಿ ಬಿಲ್ಲವರ ಸಂಘಟನೆಗಳಿಂದ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ ಸುವರ್ಣರ ವಿರುದ್ಧವೂ ಟೀಕೆ ವ್ಯಕ್ತವಾಗಿತ್ತು.

ಟೀಕೆ ವಿರೋಧಗಳ ನಡುವೆಯೂ ಸಂಸದ ನಳಿನ್ ಕುಮಾರ್ ಇಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬ್ರಹ್ಮಶ್ರೀ ಪ್ರಶಸ್ತಿಯನ್ನು ಮಾತ್ರ ನಯವಾಗಿ ತಿರಸ್ಕರಿಸಿ, ಅದನ್ನ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಅವರ ಪಾದ ಕಮಲಕ್ಕೆ ಅರ್ಪಿಸಿದ್ದಾರೆ. ಬ್ರಹ್ಮಶ್ರೀ ಯಂತಹ ಪ್ರಶಸ್ತಿ ಸ್ವೀಕರಿಸಲು 69 ವರ್ಷ ಕಳೆಯಬೇಕು. ರಾಜಕೀಯ ಕ್ಷೇತ್ರದಲ್ಲಿ ನಾರಾಯಣ ಗುರುಗಳ ಆದರ್ಶಗಳನ್ನು ಅಳವಡಿಸಿ ಸರಳ, ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಿ , ಯಾವುದೇ ಪ್ರಶಸ್ತಿಯನ್ನು ನಿರಾಕರಿಸಿರುವ ಜಿಲ್ಲೆಯ ಏಕೈಕ ವ್ಯಕ್ತಿಯಾದ ಜನಾರ್ದನ ಪೂಜಾರಿಗಳೇ ಬ್ರಹ್ಮಶ್ರೀ ಪ್ರಶಸ್ತಿಗೆ ಅರ್ಹರು ಎಂದು ಹೇಳಿದರು.

ಅವರ ಮುಂದೆ ನಾನು ಇನ್ನೂ‌ ಯುವಕ. ನನಗೆ 60 ದಾಟಲಿಲ್ಲ. ರಾಜಕೀಯದಲ್ಲಿ ಸಾಧಿಸಲು ಇನ್ನೂ ಬಹಳಷ್ಟು ಇದೆ. ಹಾಗಾಗಿ ಈ ಪ್ರಶಸ್ತಿ ಸ್ವೀಕರಿಸಲು ನಾನು ಎಷ್ಟು ಅರ್ಹನೋ ಎಂಬ ಜಿಜ್ಞಾಸೆ ಮನಸಲ್ಲಿ ಮೂಡಿದ್ದು ಹಾಗಾಗಿ ನಾನು ಈ ಪ್ರಶಸ್ತಿ ಸ್ವೀಕರಿಸಲ್ಲ ಎಂದರು. ಒಂದಂತೂ ದೇವರ ಪ್ರಮಾಣವಾಗಿ ಹೇಳುವುದೆಂದರೆ ನಾನು ಯಾವ ಜಾತಿಗೂ ಸಂಬಂಧಿಸಿದವನಲ್ಲ. ಹಿಂದು ಸಂಸ್ಕೃತಿಯಲ್ಲಿ ಅಚಲ ನಂಬಿಕೆಯಿಟ್ಟು ಮುನ್ನಡೆಯುತ್ತೇನೆ. ನಾನು ಮೂರು ಬಾರಿ ಸಂಸದನಾಗುವುದಕ್ಕೆ ಬಿಲ್ಲವ ಸಮುದಾಯವೂ ಕಾರಣ. ನನ್ನದು ಮತ್ತು ಕೆ.ಟಿ ಸುವರ್ಣರದ್ದು ಹದಿನೈದು ವರ್ಷಗಳ ಸಂಬಂಧ ಎಂದು ಹೇಳಿದರು. 

ಜನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ಹನ್ನೆರಡು ವರ್ಷಗಳ ಹಿಂದೆ ಸೂರಿಂಜೆಯಲ್ಲಿ ಸಂಸದ ನಳಿನ್ ಅವರು ಒಂದಲ್ಲ ಒಂದು ದಿವಸ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆಂದು ಹೇಳಿದ್ದೆ. ಆ ಕಾಲವೂ ಸನ್ನಿಹಿತವಾಗುತ್ತಿದೆ. ಅವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪಡೆಯುವ ಅರ್ಹತೆಗಳಿದ್ದರೂ ಅವರಿಗೆ ಅದನ್ನು ಸ್ವೀಕರಿಸಲು ಇಷ್ಟ ಇಲ್ಲದಿದ್ದರೆ ನಾವು ಒತ್ತಾಯ ಪೂರ್ವಕ ಕೊಡುವುದು ತಪ್ಪು. ಅವರು ಆದಷ್ಟು ಬೇಗನೆ ಮುಖ್ಯಮಂತ್ರಿಗಳಾಗಲಿ ಎಂದು ಆಶಿಸಿದರು.

ಉಳ್ಳಾಲ ಬಂಟರ ಸಂಘದ ಅಧ್ಯಕ್ಷರಾದ ಸುರೇಶ್ ಚೌಟ, ಉಳಿಯ ಶ್ರೀ ಉಳ್ಳಾಲ್ತಿ ಧರ್ಮಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕುತ್ತಾರು, ಕುಲಾಲ ಸಂಘದ ಜಿಲ್ಲಾಧ್ಯಕ್ಷ ಮಯೂರ್ ಉಳ್ಳಾಲ್, ಗಟ್ಟಿ ಸಮಾಜದ ಕಾರ್ಯದರ್ಶಿ ಪದ್ಮನಾಭ ಗಟ್ಟಿ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್ , ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶಾಸ್ತ ಕಿನ್ಯ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಉಳ್ಳಾಲ್, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ .ಶೇಖರ್ ಉಪಸ್ಥಿತರಿದ್ದರು.


ವೇದಿಕೆಯ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಪ್ರಸ್ತಾವಿಸಿದರು. ಅಧ್ಯಕ್ಷ ಕೆ.ಟಿ .ಸುವರ್ಣ ಸ್ವಾಗತಿಸಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments