ಮಂಗಳೂರು, ಫೆ.16: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರ ತಂಡ ಕಪಾಟು ಒಡೆದು 60 ಗ್ರಾಂ ಚಿನ್ನದ ಆಭರಣಗಳನ್ನು ಕಳವುಗೈದ ಘಟನೆ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ನಡೆದಿದೆ.
ಕುಳಾಯಿ ನಿವಾಸಿ, ಮನೆ ಮಾಲೀಕ ಶ್ರೀನಿವಾಸ ಆಚಾರ್ಯ ಎಂಬವರು ಫೆ.14ರಂದು ಸೂರಿಂಜೆಯಲ್ಲಿರುವ ತಮ್ಮನ ಮನೆಗೆ ಕುಟುಂಬದ ಕಾರ್ಯಕ್ಕೆಂದು ತೆರಳಿದ್ದರು. 15ರಂದು ಬೆಳಗ್ಗೆ ಬಂದು ನೋಡಿದಾಗ, ಮನೆಯ ಬೀಗವನ್ನು ಪಿಕ್ಕಾಸಿನಿಂದ ಒಡೆದು ಹಾಕಿದ ರೀತಿ ಕಂಡುಬಂದಿದೆ. ಮನೆಯ ಒಳಗೆ ನೋಡಿದಾಗ, ಬೆಡ್ ರೂಮಿನಲ್ಲಿದ್ದ ಕಪಾಟನ್ನು ಒಡೆದು ಅದರಲ್ಲಿದ್ದ ಶ್ರೀನಿವಾಸ ಆಚಾರ್ಯರ ಪತ್ನಿ ವತ್ಸಲಾರ 35 ಗ್ರಾಮ್ ತೂಕದ ಮುತ್ತಿನ ಸರ, 8 ಗ್ರಾಮ್ ತೂಕದ ಕಿವಿಯೋಲೆ ಹಾಗೂ ಶ್ರೀನಿವಾಸರ ಅಣ್ಣ ಗಂಗಾಧರ ಆಚಾರ್ಯರ ಪತ್ನಿ ಕವಿತಾರಿಗೆ ಸೇರಿದ 8 ಗ್ರಾಂ ತೂಕದ ಹವಳದ ಸರ ಹಾಗೂ ತಲಾ ನಾಲ್ಕು ಗ್ರಾಂ ತೂಕದ ಎರಡು ಉಂಗುರಗಳನ್ನು ಕಳವು ಮಾಡಿದ್ದು ತಿಳಿದುಬಂದಿದೆ.
ಈ ಬಗ್ಗೆ ಶ್ರೀನಿವಾಸ ಆಚಾರ್ಯ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಇವರು ಮನೆಯಿಂದ ಹೊರ ಹೋಗಿದ್ದನ್ನು ತಿಳಿದ ಯಾರೋ ಫೆ.14ರಂದು ಈ ಕೃತ್ಯ ಮಾಡಿದ್ದಾರೆಂದು ಶಂಕಿಸಲಾಗಿದೆ.