ನವದೆಹಲಿ : ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) 2019 ರ ಅನುಷ್ಠಾನಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಂಗಳವಾರ ತಿಳಿಸಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಗೂ ಸರಕಾರ ಮಾಹಿತಿ ನೀಡಿದೆ.
ಸಿಎಎ ಕಾಯ್ದೆ 2019ರ ಡಿಸೆಂಬರ್ 12ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಈ ನಿಯಮ ಜಾರಿಗೆ ಬಂದಿದೆ. ಜನವರಿ 10, 2020 ಕಾಯ್ದೆ ಪ್ರಕಾರ ನಿಯಮಾವಳಿಗಳು ಸಿದ್ಧವಾಗಿವೆ. ಅಧೀನ ಶಾಸನ, ಲೋಕಸಭೆ ಮತ್ತು ರಾಜ್ಯಸಭೆಗಳ ಸಮಿತಿಗಳು ಈ ನಿಯಮಗಳನ್ನು ಸಿಎಎ ಕಾಯಿದೆಯ ಅಡಿಯಲ್ಲಿ ರಚಿಸಲು ಅನುಕ್ರಮವಾಗಿ ಏಪ್ರಿಲ್ 9, 2021 ಮತ್ತು ಆಗಸ್ಟ್ 9, 2021ರವರೆಗೆ ಕಾಲಾವಕಾಶ ವನ್ನು ನೀಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸಿಎಎ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸೇರಿದಂತೆ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ವನ್ನು ನೀಡಲು ಈ ಕಾಯ್ದೆ ಯಲ್ಲಿ ಅವಕಾಶ ಕಲ್ಪಿಸಲಾಗಿದೆ.