ಮಂಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ಕೋರಿದ್ದಾರೆ.
“ಚಾರ್ಮಾಡಿ ಘಾಟಿ ರಸ್ತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಈ ಹಿಂದೆ ರಸ್ತೆಯು ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಮತ್ತು ರಸ್ತೆ ಕುಸಿತದಿಂದ ಹಾನಿಗೊಳಗಾಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಪ್ರಸ್ತುತ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಪ್ರಸ್ತುತ ಈ ರಸ್ತೆಯು ನವೀ ಕರಣಗೊಂಡು ರಸ್ತೆಗಳು ಸುರಕ್ಷಿತ ವಾಗಿದ್ದರೂ ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರುವುದಿಲ್ಲ.
ಆದುದರಿಂದ ಈ ಮಾರ್ಗವಾಗಿ ಬರುತ್ತಿದ್ದ ಹಣ್ಣು, ತರಕಾರಿ, ಆಹಾರ ಸಾಮಗ್ರಿಗಳು ಮತ್ತು ಜೀವನೋಪಯೋಗಿ ವಸ್ತು ಗಳು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸರಬರಾಜು ಆಗದೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾಗಿ ಶ್ರೀಸಾಮಾನ್ಯರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ’ ಎಂದವರು ಜಿಲ್ಲಾಧಿಕಾರಿ ಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
“10 ಟನ್ ಸಾಮರ್ಥ್ಯದ 6 ಚಕ್ರಗಳ ಸರಕು ಸಾಗಾಣೆ ವಾಹನಗಳಿಗೆ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಈ ಮಾರ್ಗದಲ್ಲಿ ಸಂಚಾರ ಮಾಡಲು ಬಹು ಜನರ ಬೇಡಿಕೆಯಂತೆ ಅವಕಾಶ ನೀಡಬೇಕೆಂದು’ ಹರೀಶ್ ಕುಮಾರ್ ಅವರು ಜಿಲ್ಲಾಧಿಕಾರಿಯವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.