ಪ್ರಧಾನಿ ಮೋದಿ ಶಕ್ತಿ ಕುಂದಿಸಲು ಸಿಎಂ ಪುತ್ರ ವಿಜಯೇಂದ್ರ ಫಂಡಿಂಗ್…!!!
ಬೆಂಗಳೂರು: ಒಂದಾದರೊಂದರಂತೆ ಸ್ಪೋಟಕ ಹೇಳಿಕೆಗಳನ್ನು ಕೊಡುತ್ತಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೇಲೆ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಕೇಂದ್ರ ಬಿಜೆಪಿ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಬಂದಿರುವುದನ್ನು ಸ್ಪಷ್ಟಪಡಿಸಿರುವ ಅವರು, ಅದಕ್ಕೆ ಉತ್ತರ ಕೊಟ್ಟಿರುವುದಾಗಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶೋಕಾಸ್ ನೋಟಿಸ್ ಕುರಿತು ಮಾತನಾಡಿರುವ ಅವರು ಹಲವು ಸ್ಪೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿನ್ನಡೆಯಾಗುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಯತ್ನ ಪಟ್ಟಿದ್ದಾರೆಂಬ ಆರೋಪ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ತಮಗೆ ಕಾರಣ ಕೇಳಿ ಬಂದಿದ್ದ ನೋಟಿಸ್‌ಗೆ ಬರೋಬ್ಬರಿ 11 ಪುಟಗಳ ಉತ್ತರ ಕೊಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಾಕ್ಷಿ ಸಹಿತ 45 ಆರೋಪಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಮಾಡಿದ್ದಾರೆ.
ಕೇಂದ್ರ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್‌ಗೆ ತಾವು ಉತ್ತರಿಸಿದ್ದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. ಅವರು ಕೊಟ್ಟಿರು ಉತ್ತರದಲ್ಲಿ ಏನೇನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ!
ವಿಜಯೇಂದ್ರ ಮೇಲೆ ತನಿಖೆಗೆ ಆಗ್ರಹ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಂದಿಸಲು ವಿಜಯೇಂದ್ರ ಅವರು ಪ್ರಯತ್ನಿಸಿದ್ದಾರೆಂಬ ಗಂಭೀರ ಆರೋಪವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿದ್ದಾರೆ. ಕೇಂದ್ರ ಶಿಸ್ತು ಸಮಿತಿಯ ಕಾರಣ ಕೇಳಿ ನೋಟಿಸ್‌ಗೆ ಉತ್ತರಿಸಿರುವ ಅವರು ಈ ಎಲ್ಲವನ್ನು ಉಲ್ಲೇಖಿಸಿದ್ದಾರೆ.
ಕೇಂದ್ರಿದಂದ ನನಗೆ ಷೋಕಾಸ್ ನೋಟಿಸ್ ಬಂದಿದೆ. ಅದಕ್ಕೆ 45 ಅಂಶಗಳನ್ನು ಉಲ್ಲೇಖಿಸಿ ಉತ್ತರ ಕೊಟ್ಟಿದ್ದೇನೆ. ಎಲ್ಲೂ ವಿಷಾದ ವ್ಯಕ್ತಪಡಿಸಿಲ್ಲ, ಅಥವಾ ಕ್ಷಮೆ ಕೇಳಿಲ್ಲ. ನಾನು ಪಕ್ಷದ ವಿರೋಧಿ ಚಟುವಟಿಕೆ ಎಲ್ಲೂ ಮಾಡಿಲ್ಲ. ಸಿಎಂ ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಕೆಲವು ಆರೋಪ ಮಾಡಿದ್ದೇನೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಮೋದಿ ಶಕ್ತಿ ಕುಂದಿಸಲು ವಿಜಯೇಂದ್ರ ಫಂಡಿಂಗ್!
ಮುಖ್ಯವಾಗಿ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಬಿ.ವೈ. ವಿಜಯೇಂದ್ರ ಕೋಟ್ಯಂತರ ರೂ. ಫಂಡಿಂಗ್ ಮಾಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ, ಕಾಂಗ್ರೆಸ್ ಪಕ್ಷಗಳಿಗೆ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಗ್ಗಿಸಲು ವಿಜಯೇಂದ್ರ ಈ ರೀತಿ ಹಣ ಕೊಟ್ಟಿದ್ದಾರೆ ಎಂದು ಯತ್ನಾಳ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಇದು ಬಿಜೆಪಿಯಲ್ಲಿ ಮತ್ತೊಂದು ಹಂತದ ವಿಪ್ಲವಕ್ಕೆ ಕಾರಣವಾಗಲಿದೆ ಎನ್ನಲಾಗಿದೆ.
ಬಿಹಾರದಲ್ಲಿ ಬಿಜೆಪಿ ಸೋಲಿಸಲು ಪ್ಲಾನ್!
ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ಎಷ್ಟು ಹಣ ಕಳುಹಿಸಿದ್ದಾರೆ? ವಿಜಯೇಂದ್ರ ಅವರ ಆಪ್ತರ ಮೂಲಕ ಹಣ ಎಷ್ಟು ಕಳುಹಿಸಿದ್ದರು ಎಂಬುದರ ಬಗ್ಗೆ ತನಿಖೆ ಆಗಬೇಕು. ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆ ಬಗ್ಗೆ ತನಿಖೆ ಮಾಡಬೇಕು ಎಂದು ಉತ್ತರದಲ್ಲಿ ಹೇಳಿದ್ದೇನೆ. 11 ಪುಟಗಳ ಪತ್ರದಲ್ಲಿ
45 ಉಲ್ಲೇಖಗಳನ್ನು ಮಾಡಿದ್ದೇನೆ, ಪ್ರತಿ ವಿಚಾರವನ್ನು ಮುಂದೆ ಹಂತ ಹಂತವಾಗಿ ಮಾಧ್ಯಮದ ಮುಂದೆ ಹೇಳುತ್ತೇನೆ ಎಂದು ಶಾಸಕ ಯತ್ನಾಳ್ ಹೊಸ ಬಾಂಬ್ ಹಾಕಿದ್ದಾರೆ.
ಮಾರಿಷಸ್‌ಗೆ ಯಾಕೆ ಹೋಗಿದ್ದರು?
ಮಾರಿಷಸ್ ವಿಚಾರವನ್ನು ಉತ್ತರದಲ್ಲಿ ಬರೆದಿದ್ದೇನೆ. ಮಾರಿಷಸ್‌ಗೆ ಯಾಕೆ ಹೋಗಿದ್ದರು? ಅಲ್ಲಿಗೆ ಯಾವ ಫ್ಲೈಟ್‌ನಲ್ಲಿ ಹೋಗಿದ್ದರು? ಎಂಬುದನ್ನು ಉತ್ತರದಲ್ಲಿ ವಿವರಿಸಿದ್ದೇನೆ. ಜೊತೆಗೆ ಆ ಫ್ಲೈಟ್ ನಂಬರ್ ಕೂಡ ಬರೆದಿದ್ದೇನೆ. ಎಷ್ಟು ಜನ ಹೋಗಿದ್ದರು? ಮಾಜಿ ಗೃಹ ಸಚಿವರೊಬ್ಬರ ಪಿಎ ಮೂಲಕ ಮಾರಿಷಸ್‌ಗೆ ಏನೇನು ತೆಗೆದುಕೊಂಡು ಹೋಗಿದ್ದರು ಎಂಬುದರ ಸಂಪೂರ್ಣ ತನಿಖೆ ಮಾಡಲು ಶೋಕಾಸ್ ನೋಟಿಸ್‌ಗೆ ಕೊಟ್ಟಿರುವ ಉತ್ತರದಲ್ಲಿ ಆಗ್ರಹಿಸಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.